ರಾಜಧಾನಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿಂದು ಹೈಡ್ರಾಮಾ ನಡೆದಿದೆ. ನೀಟ್ ಅಕ್ರಮದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯು ಯೂತ್ ಕಾಂಗ್ರೆಸ್ ನಾಯಕರ ಬಣ ರಾಜಕೀಯಕ್ಕೆ ಸಾಕ್ಷಿಯಾಗಿದೆ. ನೋಟಿಸ್ ನೀಡದೆ ಪದಾಧಿಕಾರಿಗಳನ್ನು ಕಿತ್ತೆಸೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ನಾಯಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೇ 21 ರಂದು ಹಮ್ಮಿಕೊಳ್ಳಲಾಗಿರುವ ನೀಟ್ (NEET) ಅಕ್ರಮ ವಿರೋಧಿ ಪ್ರತಿಭಟನೆಯ ಪೂರ್ವಭಾವಿ ಸಭೆಯು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಆಂತರಿಕ ಜಗಳದಿಂದಾಗಿ ರಣರಂಗವಾಗಿ ಮಾರ್ಪಟ್ಟಿದೆ. ಸಭೆ ನಡೆಯುತ್ತಿದ್ದ ವೇಳೆ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಕೆಲವು ಪದಾಧಿಕಾರಿಗಳನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ತೀವ್ರ ವಾಗ್ವಾದ ನಡೆದು, ಅದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ತೀವ್ರ ಆಕ್ರೋಶಗೊಂಡ ಕಾರ್ಯಕರ್ತರು ಕೆಪಿವೈಸಿಸಿ (KPYCC) ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಂ ಭಂಡಾರಿ ಅವರಿಗೆ ಮುತ್ತಿಗೆ ಹಾಕಿ ಘೇರಾವ್ ನಡೆಸಿದ್ದರಿಂದ ಕಚೇರಿಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

