BELAGAVI

ಬೆಳಗಾವಿ ಮಹಾವಂಚನೆ ಕೇಸ್: ಶಿವಾನಂದ ನೀಲಣ್ಣವರ್‌ಗೆ 10 ದಿನ ಸಿಐಡಿ ಕಸ್ಟಡಿ

Share

ಬೆಳಗಾವಿಯ ಬಹುಕೋಟಿ ಹಗರಣದ ಕಿಂಗ್‌ಪಿನ್ ಶಿವಾನಂದ ನೀಲಣ್ಣವರ್‌ನನ್ನು ನ್ಯಾಯಾಲಯ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆ ವೇಳೆ ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು ಹಾಗೂ ಆರೋಪಿ ನಡುವೆ ಮಹತ್ವದ ಸಂಭಾಷಣೆ ನಡೆದಿದ್ದು, ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.”

ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ್ ಕೆ.ಎನ್. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸುಮಾರು 35 ಸಾವಿರ ಹೂಡಿಕೆದಾರರ 1 ಸಾವಿರ ಕೋಟಿ ರೂಪಾಯಿ ಹಗರಣ ಇದಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿ ತನಿಖೆ ನಡೆಸಬೇಕಿರುವುದರಿಂದ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರಿದ್ದರು. ಇದೇ ವೇಳೆ ಆರೋಪಿ ತನಗೆ ಶುಗರ್ ಮತ್ತು ಹಾರ್ಟ್ ಪ್ರಾಬ್ಲಮ್ ಇರುವುದಾಗಿ ಹೇಳಿಕೊಂಡಾಗ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದರು. ಇನ್ನು “35 ಸಾವಿರ ಜನರಿಗೆ ಹಣ ಬೇಕಿಲ್ಲ, ನಾನು ಬೇಕಾಗಿದ್ದೇನೆ” ಎಂದ ಆರೋಪಿಗೆ ತಿರುಗೇಟು ನೀಡಿದ ನ್ಯಾಯಾಧೀಶರು, “ಅಮಾಯಕ ಜನರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ, ಸಾಕಷ್ಟು ಜನ ಹಣ ತಗೊಂಡು ಓಡಿಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ, ಧರ್ಮೋ ರಕ್ಷತಿ ರಕ್ಷಿತಃ” ಎಂದು ಶ್ಲೋಕದ ಉದಾಹರಣೆ ನೀಡಿ ಬುದ್ಧಿವಾದ ಹೇಳಿದರು. ಕೊನೆಗೆ ಕೋರ್ಟ್ ಹಾಲ್‌ನಿಂದ ಹೊರಬರುತ್ತಿದ್ದಂತೆ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ್ ಕಣ್ಣೀರು ಹಾಕಿದ್ದಾರೆ.

ಸಿಐಡಿ ಡಿಜಿಪಿ ಭೀಮಾಶಂಕರ ಗುಳೇದ್ ನೇತೃತ್ವದ ತಂಡ ಈಗಾಗಲೇ ಪ್ರಾಥಮಿಕ ತನಿಖೆ ಮುಗಿಸಿದ್ದು, ಮಾಳಮಾರುತಿ ಪೊಲೀಸರು ಕಲೆಹಾಕಿದ್ದ ಎಲ್ಲಾ ಮಹತ್ವದ ದಾಖಲೆಗಳೊಂದಿಗೆ ಆರೋಪಿಯನ್ನು ಇಂದೇ ಬೆಂಗಳೂರಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಿದೆ. ಹೂಡಿಕೆದಾರರ ಹಣ ನೀಡಲು ರೆಡಿ ಇದ್ದಾರೆ ಎಂಬ ಆರೋಪಿ ಪರ ವಕೀಲರ ವಾದವನ್ನು ಸದ್ಯಕ್ಕೆ ಆಲಿಸಲು ನ್ಯಾಯಾಧೀಶರು ನಿರಾಕರಿಸಿದ್ದಾರೆ. ಇನ್ನೊಂದೆಡೆ, ಆರೋಪಿ ಪರ ವಕೀಲರಾದ ಮಂಜುನಾಥ ಜಿ.ಎಲ್. ಅವರು, “ಇದು ಕೇವಲ ತಾಂತ್ರಿಕ ಕಾರಣಗಳಿಗಾಗಿ ಆರ್‌ಬಿಐ ಗೈಡ್‌ಲೈನ್ಸ್ ಉಲ್ಲಂಘನೆಯಾಗಿದೆ ಎಂದು ಪೊಲೀಸರೇ ದಾಖಲಿಸಿರುವ ಸುಮೋಟೋ ಕೇಸ್ ಆಗಿದೆ. ಗ್ರಾಹಕರು ಯಾರೂ ದೂರು ನೀಡಿಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ. ವಿರೋಧಿಗಳು ತಪ್ಪು ಮಾಹಿತಿ ಹರಡುತ್ತಿದ್ದು, ಈಗಾಗಲೇ ಬೇಲ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ” ಎಂದು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ.

Tags:

error: Content is protected !!