Khanapur

ದಕ್ಷತೆಯ ಪ್ರತೀಕ ಹವಾಲ್ದಾರ್ ಜಗದೀಶ್ ಕಾದ್ರೋಳ್ಳಿಗೆ ಬೈಲೂರು ನಿಷ್ಕಲ ಮಂಟಪದಲ್ಲಿ ಅದ್ಧೂರಿ ಸನ್ಮಾನ

Share

ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ನಡೆದ ಬಸವಜಯಂತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ, ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳ ಪದಕ ಮುಡಿಗೇರಿಸಿಕೊಂಡ ಖಾನಾಪೂರ ಪೊಲೀಸ್ ಠಾಣೆಯ ದಕ್ಷ ಹವಾಲ್ದಾರ್ ಜಗದೀಶ್ ಕಾದ್ರೋಳ್ಳಿ ಅವರನ್ನು ಅತ್ಯಂತ ಸಡಗರದಿಂದ ಸತ್ಕರಿಸಿ ಗೌರವಿಸಲಾಯಿತು.

ಖಾನಾಪೂರ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಕಾದ್ರೋಳ್ಳಿ ಅವರು ತಮ್ಮ ಚಾತುರ್ಯತೆ ಹಾಗೂ ದಕ್ಷತೆಯಿಂದ ಅನೇಕ ಕಠಿಣ ಪ್ರಕರಣಗಳನ್ನು ಭೇದಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯ ಗಮನ ಸೆಳೆದಿದ್ದರು. ಇವರ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತದಿಂದ ಪದಕ ಸ್ವೀಕರಿಸಿ ಠಾಣೆಯ ಕೀರ್ತಿ ಹೆಚ್ಚಿಸಿದ್ದ ಜಗದೀಶ್ ಅವರನ್ನು, ಬೈಲೂರು ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ ಪಾಲ್ಗೊಂಡು ಜಗದೀಶ್ ಅವರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು. ಜನವಾಡದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮುದಗಲ್ಲದ ಪೂಜ್ಯ ಶ್ರೀ ಮಹಾಂತ ಮಹಾಸ್ವಾಮಿಗಳು ಹಾಗೂ ಮುಮ್ಮಿಗಟ್ಟಿಯ ಶ್ರೀ ಬಸವಾನಂದ ಸ್ವಾಮಿಗಳು ಸೇರಿದಂತೆ ಹಿರಿಯ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಜಗದೀಶ್ ಕಾದ್ರೋಳ್ಳಿ ಅವರು ಮುಂದಿನ ದಿನಗಳಲ್ಲೂ ಇದೇ ರೀತಿಯ ಪ್ರಾಮಾಣಿಕ ಹಾಗೂ ದಕ್ಷ ಸೇವೆಯನ್ನು ಮುಂದುವರಿಸಲಿ ಎಂದು ಆಶಿಸಿ ಶುಭ ಹಾರೈಸಲಾಯಿತು.

Tags:

error: Content is protected !!