ಗಾಯದ ಮೇಲೆ ಬರೆ ಎಳೆದಂತೆ ಜನಸಾಮಾನ್ಯರಿಗೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏಕಾಏಕಿ ಮೂರು ರೂಪಾಯಿ ಹೆಚ್ಚಳವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ತೈಲ ಬೆಲೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದ್ದು, ವಾಹನ ಸವಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 106 ರೂಪಾಯಿ ತಲುಪಿದ್ದರೆ, ಡೀಸೆಲ್ ಬೆಲೆ 93.97 ರೂಪಾಯಿಗೆ ಏರಿಕೆಯಾಗಿದೆ. ಈಗಾಗಲೇ ದಿನಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ, ಈ ತೈಲ ದರ ಏರಿಕೆ ಗುತ್ತಿಗೆ ಬಿದ್ದಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದರ ಇಳಿಕೆ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ವಿಶೇಷವಾಗಿ ದೂರದ ಊರುಗಳಿಂದ ನಗರಗಳಿಗೆ ಬಂದು ಕೂಲಿ ಕೆಲಸ ಹಾಗೂ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿರುವ ಜನರ ಬದುಕು ದುಸ್ತರವಾಗಿದೆ. ಈಗಾಗಲೇ ಮೆಸ್ ಅಥವಾ ಹೋಟೆಲ್ಗಳಲ್ಲಿ ಊಟದ ದರ ಏರಿಕೆಯಾಗಿದ್ದು, ಈಗ ವಾಹನ ಚಾಲನೆಗೂ ಹೆಚ್ಚಿನ ಹಣ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತೈಲ ಬೆಲೆ ಏರಿಕೆಯ ಪರಿಣಾಮ ಸಾರಿಗೆ ವೆಚ್ಚ ಹೆಚ್ಚಲಿದ್ದು, ಇದರಿಂದ ಮತ್ತಷ್ಟು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಆತಂಕ ಜನರನ್ನು ಕಾಡುತ್ತಿದೆ. ಸಣ್ಣ ವ್ಯಾಪಾರಿಗಳು ಮತ್ತು ಶ್ರಮಿಕ ವರ್ಗದವರು ಈ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸಾರಿಗೆ ಮತ್ತು ಸರಕು ಸಾಗಣೆ ವಾಹನಗಳ ಮೇಲೆ ಈ ಬೆಲೆ ಏರಿಕೆ ನೇರ ಪರಿಣಾಮ ಬೀರಲಿದೆ. “ದುಡಿಯುವ ಹಣವೆಲ್ಲ ಪೆಟ್ರೋಲ್ ಮತ್ತು ಊಟಕ್ಕೇ ಹೋದರೆ ಬದುಕುವುದು ಹೇಗೆ?” ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಮಧ್ಯಮ ವರ್ಗದವರ ಬಜೆಟ್ ಸಂಪೂರ್ಣವಾಗಿ ಏರುಪೇರಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ಜನಸಾಮಾನ್ಯರು ಮತ್ತು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುವ ಮುನ್ಸೂಚನೆ ನೀಡಿದ್ದಾರೆ.
