BELAGAVI

ಶಿವಾನಂದ ನೀಲಣ್ಣನವರ್ ಕಚೇರಿಗಳು ಸೀಜ್.

Share

ಗೆ ಸೇರಿದ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣ ದಿನೇದಿನೇ ಭಾರೀ ತಿರುವು ಪಡೆಯುತ್ತಿದ್ದು, ಇದೀಗ ತನಿಖೆ ಮತ್ತಷ್ಟು ಗಂಭೀರ ಹಂತ ತಲುಪಿದೆ. ಅಧಿಕಾರಿಗಳು ಶಿವಾನಂದ ನೀಲಣ್ಣನವರ್‌ಗೆ ಸಂಬಂಧಿಸಿದ ಮೂರು ಕಚೇರಿಗಳು ಹಾಗೂ ಅಪಾರ್ಟ್‌ಮೆಂಟ್‌ನಲ್ಲಿದ್ದ ಕೆಲವು ಪ್ಲಾಟ್‌ಗಳನ್ನು ಸೀಜ್ ಮಾಡಿರುವ ಮಾಹಿತಿ ಲಭ್ಯವಾಗಿದೆ.

ದಾಳಿಯ ವೇಳೆ ಕಚೇರಿಗಳಲ್ಲಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಮಹತ್ವದ ದಾಖಲೆಗಳು ಹಾಗೂ ನೂರಾರು ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ಮೊಬೈಲ್ ಫೋನ್ ಕೂಡ ಸೀಜ್ ಮಾಡಲಾಗಿದ್ದು, ಡಿಜಿಟಲ್ ವ್ಯವಹಾರಗಳ ಮಾಹಿತಿ ಸಂಗ್ರಹಿಸಲು ತಾಂತ್ರಿಕ ಪರಿಶೀಲನೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಶಿವಾನಂದ ನೀಲಣ್ಣನವರ್ ಅವರನ್ನು ತಡರಾತ್ರಿ ವರೆಗೆ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ದಾಖಲೆ ಹಾಗೂ ಹಣಕಾಸು ವ್ಯವಹಾರಗಳ ವಿವರ ನೀಡುವಂತೆ ಸೂಚಿಸಿ, ಶುಕ್ರವಾರ ಬೆಳಿಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಶಿವಬಸವ ನಗರದ ನಿವಾಸದಲ್ಲಿದ್ದ ಶಿವಾನಂದರನ್ನು ಈಗ ಕಟ್ಟುನಿಟ್ಟಿನ ನಿಗಾದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ಶಿವಾನಂದ ನೀಲಣ್ಣನವರ್, “ಸುಮಾರು 35 ಸಾವಿರ ಹೂಡಿಕೆದಾರರು ಇದ್ದಾರೆ. ಒಟ್ಟು 2500 ಕೋಟಿ ರೂಪಾಯಿ ವ್ಯವಹಾರ ನಡೆದಿದೆ” ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಹೆಚ್ಚಾಗಿದೆ.

ಇದೀಗ ನಾಳೆ ಬೆಳಿಗ್ಗೆ ಸಿಐಡಿ ಅಧಿಕಾರಿಗಳ ತಂಡ ಬೆಳಗಾವಿಗೆ ಎಂಟ್ರಿ ಕೊಡಬಹುದೆಂಬ ಮಾಹಿತಿ ಹರಿದಾಡುತ್ತಿದೆ. ಪ್ರಕರಣದಲ್ಲಿ ಆರ್‌ಬಿಐ ಹಾಗೂ ಸೆಬಿ ಮಾರ್ಗಸೂಚಿಗಳನ್ನು ಸಂಪೂರ್ಣ ಉಲ್ಲಂಘಿಸಿ, ಯಾವುದೇ ಅಧಿಕೃತ ಅನುಮತಿ ಪಡೆಯದೇ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇನ್ನೊಂದೆಡೆ ಅಧಿಕಾರಿಗಳು ಫ್ರೀಜ್ ಮಾಡಿರುವ ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಸುಮಾರು 400 ಕೋಟಿ ರೂಪಾಯಿ ಠೇವಣಿ ಇರುವ ಮಾಹಿತಿ ದೊರೆತಿದ್ದು, ಉಳಿದ ಹಣ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಸಾಮಾನ್ಯ ಜನರು 10 ಲಕ್ಷಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದರೂ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವ ಪರಿಸ್ಥಿತಿಯಲ್ಲಿ, ಸಾವಿರಾರು ಕೋಟಿ ರೂಪಾಯಿ ಆನ್‌ಲೈನ್ ವ್ಯವಹಾರ ನಡೆದಿದ್ದರೂ ಸಂಬಂಧಿತ ಇಲಾಖೆಗಳ ಗಮನಕ್ಕೆ ಹೇಗೆ ಬಂದಿಲ್ಲ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಶಿವಾನಂದ ನೀಲಣ್ಣನವರ್ ಅವರ ಮನೆ ಹಾಗೂ ಕಚೇರಿಗಳ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
ಈ ಘಟನೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!