ಶಿಕ್ಷಣವು ಜ್ಞಾನ ಮತ್ತು ನಾಯಕತ್ವದ ಭೂಮಿಕೆ. ಅದರ ಮೇಲೆಯೇ ಮಾನವನ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಚಲನಚಿತ್ರದ ಹಿರಿಯ ಕಲಾವಿದೆ, ವಿಧಾನ ಪರಿಷತ್ ಸದಸ್ಯೆಯಾದ ಉಮಾಶ್ರೀ ಅವರು ಅಭಿಪ್ರಾಯಪಟ್ಟರು.

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ , ಎನ್.ಎಸ್.ಎಸ್., ಎನ್. ಸಿ.ಸಿ., ರೆಡ್ ಕ್ರಾಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಕ್ಷರ ಜ್ಞಾನ ಕೇವಲ ಉಳ್ಳವರಿಗೆ ಮಾತ್ರ ಇತ್ತು. ಮಹಾತ್ಮ ಜ್ಯೋತಿಬಾ ಫುಲೆ ಅವರಿಂದ ಸಮಾಜದಲ್ಲಿ ಅಕ್ಷರ ಕ್ರಾಂತಿ ನಡೆಯಿತು. ಈಗ ಸರ್ವರಿಗೂ ಅಕ್ಷರ ಕಲಿಯುವ ಅವಕಾಶ ಸರಕಾರ ಒದಗಿಸಿದೆ. ನಮ್ಮಲ್ಲಿ ಬಡತನ, ಸಾಮಾಜಿಕ ಸಮಸ್ಯೆ, ಕೋಮುವಾದ, ಭಯೋತ್ಪಾದನೆ ಏನೇ ಇದ್ದರೂ ಸರ್ಕಾರ ಸಮಾಜದ ಅಂಚಿನಲ್ಲಿರುವವರಿಗೂ ಶಿಕ್ಷಣ ಕೊಡುತ್ತಾ ಬಂದಿದೆ. ಇಂದು ನಾವು ಸಾಕ್ಷರತೆಯಲ್ಲಿ ನೂರರತ್ತ ಸಾಗುತ್ತಿದ್ದೇವೆ.
ನಮ್ಮ ಪೂರ್ವಜರು ತಮಗೆ ಶಿಕ್ಷಣ ಸಿಗಲಿಲ್ಲವಾದರೂ ನಮಗೆಲ್ಲರಿಗೂ ಶಿಕ್ಷಣ ಕೊಡಲು ಶ್ರಮಿಸಿದರು, ಪಣತೊಟ್ಟರು. ನನಗೆ ವಿದ್ಯೆಯ ಬೆಲೆ ಏನು ಎಂಬುದು ಆಗ ತಿಳಿದಿರಲಿಲ್ಲ. ನೀವು ಪಡೆದ ಶಿಕ್ಷಣವು ಸಮಾಜದ ಒಳಿತಿಗಾಗಿ, ಉನ್ನತಿಗಾಗಿರಲಿ. ಉತ್ತಮ ವ್ಯಕ್ತಿತ್ವಕ್ಕೆ ಸಂಸ್ಕೃತಿ, ಸಂಸ್ಕಾರ, ಹಾಗೂ ಉತ್ತಮರ ಸಂಘವು ಮುಖ್ಯ. ಮೊಬೈಲ್ ಗೀಳಿಗೆ ಬಲಿಯಾಗಬೇಡಿ. ಸಮಕಾಲೀನ ಸಂದರ್ಭದಲ್ಲಿ ಅದರಿಂದ ಬಹಳ ಅನಾಹುತವಾಗುತ್ತಿದೆ. ಬದುಕಿ ಬಾಳಬೇಕಾದ ಅದೆಷ್ಟೋ ಜೀವಗಳು ಸಾವಿನೊಂದಿಗೆ ಅಂತ್ಯವಾಗುತ್ತಿದೆ ಎಂದು ವಿಷಾದಿಸಿದರು. ಕಲೆ ಸಂಸ್ಕೃತಿ ಗೌರವಿಸಿ, ಮೈಗೂಡಿಸಿಕೊಳ್ಳಿ. ನಾನು ಸಿನಿಮಾದಲ್ಲಿ ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ. ಅದಕ್ಕೆ ಭೂಮಿಕೆ ಒದಗಿಸಿದ್ದು ರಂಗಭೂಮಿ ಎಂದರು.
ಹೆಣ್ಣನ್ನು ಭೋಗದ ವಸ್ತು, ಸೌಂದರ್ಯ ವಸ್ತುವಾಗಿ ಕಾಣುವ ಸಮಾಜದಿಂದ ಹೊರಬಂದು , ಅವಳು ನಮ್ಮ ಮನೆಯ ಹೆಣ್ಣುಮಗಳು ಎಂದು ನೋಡಬೇಕು. ಇಂದಿಗೂ ನಾವು ಅವಳಿಗೆ ಆತ್ಮರಕ್ಷಣೆಯ ಪಾಠ ಹೇಳುತ್ತಿದ್ದೇವೆ ಎಂದರೆ ಎಂಥ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದು ವ್ಯಥೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಚಲನಚಿತ್ರ ಎಂಬುದು ನಮ್ಮ ಸಂಸ್ಕೃತಿ, ನಮ್ಮ ಶಕ್ತಿ, ನಮ್ಮ ಬದುಕಿನ ಭಾಗ. ಉಮಾಶ್ರೀ ಅವರು ಚಲನಚಿತ್ರ ಕ್ಷೇತ್ರದಲ್ಲಿ ತುಂಬಾ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸವಾಲನ್ನು ಸ್ವೀಕರಿಸಿ, ಬೆಳೆದು ಬಂದ ಬಗೆ ಪ್ರತಿಯೊಬ್ಬರಿಗೂ ಮಾದರಿ. ಪ್ರತಿಯೊಂದು ಪಾತ್ರವನ್ನು ಸವಾಲಾಗಿ ಸ್ವೀಕರಿಸಿ, ಅದಕ್ಕೆ ಜೀವ ತುಂಬಿದರು. ಅದರ ಮೂಲಕ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಉಳಿಸಿದರು.
ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಇಂದು ನಮಗೆ ಪಾಠ ಮಾಡುವ ಶಿಕ್ಷಕರಿಗಿಂತ, ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಶಿಕ್ಷಕರು ಬೇಕು. ವಿದ್ಯಾರ್ಥಿಗಳು ಪದವಿ ಮುಗಿಯುತ್ತಿದ್ದಂತೆ ಕೋಚಿಂಗ್ ಇನ್ನಿತರ ತರಬೇತಿ ನೀಡುವ ಸಂಸ್ಥೆಗಳಿಗೆ ದುಬಾರಿ ಶುಲ್ಕ ನೀಡಿ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈ ವರ್ಷ ಇ – ಸ್ಪರ್ಧಾ ಅಂಥ ಮಾಡುತಿದೆ. ಅದರಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಪದವಿ ಮುಗಿಯುತ್ತಿದ್ದಂತೆ ಮನೆಗೆ ಹೋಗುವುದಕ್ಕಿಂತ ಅವರನ್ನು ಉದ್ಯೋಗದ ಕೇಂದ್ರಗಳತ್ತ ಕಳಿಸಬೇಕೆಂಬುದು ನಮ್ಮ ಆಶಯ.
ಇಂದು ಮನುಷ್ಯನನ್ನು ಯಂತ್ರಗಳು ಮೀರಿಸುತ್ತವೆ. ಆದರೆ ಯಂತ್ರಗಳನ್ನು ಮೀರಿ ಮನುಷ್ಯ ಬದುಕಬೇಕು. ಆಗ ನಾವು ಉಳಿಯಬಹುದು. ಅರ್ಹತೆ ಮತ್ತು ಪ್ರಾಮಾಣಿಕತೆ ಎರಡೂ ವಿದ್ಯಾರ್ಥಿಗಳಲ್ಲಿ ಇರಬೇಕು. ವಾಸ್ತವ ರೂಪದಲ್ಲಿ ಆಲೋಚಿಸತ್ತಾ, ಪದವಿಯ ಜೊತೆಗೆ ಕೌಶಲ್ಯ ಬೇಕು ಎಂಬ ತುಡಿತ ಅವಲ್ಲಿರಬೇಕು. ಪ್ರಯತ್ನ ನಿರಂತರವಾಗಿ, ದೀರ್ಘವಾಗಿದ್ದಾಗ ಮಾತ್ರ ಅವರು ಗುರಿಯನ್ನು ಸಲೀಸಾಗಿ ತಲುಪಬಹುದು ಎಂದರು.
