ಬೆಳಗಾವಿಯಲ್ಲಿ ಮೇ 17ರಂದು ಆಯೋಜಿಸಲು ಉದ್ದೇಶಿಸಿದ್ದ ‘ಸ್ವಚ್ಛ ಬೆಳಗಾವಿ ಸಂಭ್ರಮ’ ಬೃಹತ್ ಕಾರ್ಯಕ್ರಮಕ್ಕೆ ಈಗ ಸಂಕಷ್ಟ ಎದುರಾಗಿದೆ. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಅಳವಡಿಸಿದ್ದ ಅಕ್ರಮ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಮೂಲಕ ಸಂಘಟಕರಿಗೆ ಬಿಸಿ ಮುಟ್ಟಿಸಿದ್ದಾರೆ.


ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವತಿಯಿಂದ ಸುಮಾರು 25 ಸಾವಿರ ಜನರನ್ನು ಸೇರಿಸಿ ನಗರದ ಸರದಾರ್ ಮೈದಾನದಲ್ಲಿ ಸ್ವಚ್ಛತಾ ಅಭಿಯಾನದ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅಗತ್ಯ ಆಡಳಿತಾತ್ಮಕ ಅನುಮತಿ ಮತ್ತು ಭದ್ರತಾ ನಿಯಮಗಳನ್ನು ಪಾಲಿಸದ ಕಾರಣ ಜಿಲ್ಲಾಡಳಿತವು ಈಗಾಗಲೇ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ ಆದೇಶ ಹೊರಡಿಸಿತ್ತು. ಈ ಬೆಳವಣಿಗೆಯಿಂದ ಸಂಘಟಕರಿಗೆ ಮೊದಲ ಹಂತದಲ್ಲೇ ದೊಡ್ಡ ಹಿನ್ನಡೆಯಾಗಿತ್ತು.


ಜಿಲ್ಲಾಡಳಿತದ ಕ್ರಮದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು, ನಗರದ ಸೌಂದರ್ಯಕ್ಕೆ ಧಕ್ಕೆ ತರುವಂತೆ ಅನುಮತಿ ಇಲ್ಲದೆ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., “ನಗರದಲ್ಲಿ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಕೆ ನಿಯಮಬಾಹಿರವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
