ಬೆಳಗಾವಿಯ ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದ ಹಿಂಭಾಗದ ಕೆರೆಯ ಗೋಡೆ ಕುಸಿದು ಇಬ್ಬರು ಬಾಲಕರು ಬಲಿಯಾದ ಬೆನ್ನಲ್ಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತರ ತಂಡ ಪರಿಶೀಲನೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಮಾಲೀಕರೊಂದಿಗೆ ಚರ್ಚೆ ನಡೆಸಿದೆ.
ಬೆಳಗಾವಿಯ ದಕ್ಷಿಣಕಾಶಿ ಶ್ರೀ ಕಪಿಲೇಶ್ವರ ಮಂದಿರದ ಹಿಂಭಾಗದ ಕೆರೆಯ ಗೋಡೆ ಕುಸಿದು ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಬೆಳಗಾವಿಯನ್ನು ಕಂಗೆಡಿಸಿತ್ತು. ಈ ಭೀಕರ ದುರಂತದ ಬೆನ್ನಲ್ಲೇ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಕಾರ್ತಿಕ್ ಎಂ., ನಗರಸೇವಕ ರಾಜು ಭಾತಕಾಂಡೆ ಹಾಗೂ ಅಭಿಯಂತರರ ತಂಡ ಸ್ಥಳಕ್ಕೆ ಭೇಟಿ ನೀಡಿತು. ಕೆರೆಯ ಸದ್ಯದ ಸ್ಥಿತಿಗತಿಯನ್ನು ಅವಲೋಕಿಸಿದ ತಂಡವು, ಕೂಡಲೇ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಲೀಕರೊಂದಿಗೆ ಗಂಭೀರ ಸಮಾಲೋಚನೆ ನಡೆಸಿತು.
ಪರಿಶೀಲನೆಯ ನಂತರ ಮಾತನಾಡಿದ ಆಯುಕ್ತ ಕಾರ್ತಿಕ್ ಎಂ., ಈ ಕೆರೆಯ ಜಾಗವು ಖಾಸಗಿ ಆಸ್ತಿಗೆ ಸೇರಿದ್ದಾಗಿದೆ ಎಂದು ಸ್ಪಷ್ಟಪಡಿಸಿದರು. ಇತ್ತೀಚಿನ ಮಳೆಯಿಂದಾಗಿ ಕೆರೆಯ ಮತ್ತೊಂದು ಪಾರ್ಶ್ವದ ಗೋಡೆಯೂ ಕುಸಿದಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೆರೆಯ ಸುತ್ತಮುತ್ತ ವಾಸವಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಅಭಿಯಂತರರು ಜಂಟಿಯಾಗಿ ಸ್ಥಳದ ಸಮೀಕ್ಷೆ ನಡೆಸಿದ್ದು, ಹೆಚ್ಚಿನ ಅಪಾಯ ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದರು. ಬೈಟ್
ನಗರಸೇವಕ ರಾಜು ಭಾತಕಾಂಡೆ ಮಾತನಾಡಿ,


ಕೆರೆಯ ಮಾಲೀಕರೊಂದಿಗೆ ಸಭೆ ನಡೆಸಿ ಇಲ್ಲಿ ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೀಘ್ರದಲ್ಲೇ ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಅವಶ್ಯಕ ಕಾಮಗಾರಿಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು. ಬೈಟ್

