Belagavi

ಬೆಳಗಾವಿಯಲ್ಲಿ ಭೀಕರ ಭೂ ಹಗರಣ: ಕ್ಯಾನ್ಸರ್ ರೋಗಿಯ 54 ಎಕರೆ ಜಮೀನು ಲೂಟಿ!

Share

ಬೆಳಗಾವಿಯಲ್ಲಿ ಭೂಗಳ್ಳರ ಕೈಚಳಕ ಮಿತಿಮೀರಿದ್ದು, ಕ್ಯಾನ್ಸರ್ ರೋಗಿಯೊಬ್ಬರಿಗೆ ಸೇರಿದ 54 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲಾಗಿದೆ. ನ್ಯಾಯಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತ ಪ್ರವೀಣ್ ಶಾಹ್, ತಮಗೆ ಆಗಿರುವ ಅನ್ಯಾಯದ ವಿರುದ್ಧ ಕಣ್ಣೀರಿಟ್ಟಿದ್ದಾರೆ.

ಗೋಕಾಕಿನ ಪ್ರವೀಣ್ ಶಾಹ್ ಅವರು ಡಿಸೆಂಬರ್ 2024ರಲ್ಲಿ ರಾಮದುರ್ಗ ತಾಲೂಕಿನ ಗುತ್ತಿಹೋಳಿಯಲ್ಲಿ 54 ಎಕರೆ ಜಮೀನನ್ನು ಮುತಾಲಿಕ್ ದೇಸಾಯಿ ಅವರಿಂದ ಖರೀದಿಸಿದ್ದರು. ಜಮೀನಿನ ಮಾಲೀಕರು ಅಮೇರಿಕಾದಲ್ಲಿದ್ದ ಕಾರಣ, ತಾಂತ್ರಿಕ ಕಾರಣಗಳಿಂದಾಗಿ ದಾಖಲೆಗಳು ಇನ್ನೂ ಪ್ರವೀಣ್ ಶಾಹ್ ಅವರ ಹೆಸರಿಗೆ

ವರ್ಗಾವಣೆಯಾಗಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರ ತಂಡವೊಂದು, ಚಿತ್ರದುರ್ಗದ ವ್ಯಕ್ತಿಯೊಬ್ಬನನ್ನು ಮೂಲ ಮಾಲೀಕನೆಂದು ಬಿಂಬಿಸಿ, ನಕಲಿ ದಾಖಲೆಗಳ ಮೂಲಕ ಆಗಸ್ಟ್ 20, 2025ರಂದು ಬೇರೆಯವರಿಗೆ ಜಮೀನು ಮಾರಾಟ ಮಾಡಿ ಬೆಳಗಾವಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದೆ. ಈಗಾಗಲೇ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸಬ್ ರಿಜಿಸ್ಟ್ರಾರ್ ಸೇರಿದಂತೆ ಒಟ್ಟು 7 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ ಈ ಹಿಂದೆಯೇ ನಕಲಿ ದಾಖಲೆಗಳ ಬಗ್ಗೆ ನಿಗಾ ವಹಿಸುವಂತೆ ಮನವಿ ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕೈತಪ್ಪಿ ಹೋಗಿದೆ ಎಂದು ಪ್ರವೀಣ್ ಶಾಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪ್ರವೀಣ್ ಶಾಹ್, ತಾನು ಕ್ಯಾನ್ಸರ್ ರೋಗಿಯಾಗಿದ್ದು ಔಷಧಿಗಳ ಮೇಲೆ ಬದುಕುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ತಮಗೆ ಅನ್ಯಾಯವಾಗಿದ್ದು, ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ದೂರು ನೀಡಿ ಹಲವು ದಿನಗಳಾದರೂ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಅವರು, ಸರ್ಕಾರ ತಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ

Tags:

error: Content is protected !!