Belagavi

ಕಟಕೋಳ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನವಾದ 48 ಗಂಟೆಯಲ್ಲೇ ಇಬ್ಬರು ಆರೋಪಿತರ ಬಂಧನ, 21 ಲಕ್ಷದ ಒಡವೆ ವಶ!

Share

1. ಕಟಕೋಳ ಪೊಲೀಸರಿಂದ 48 ಗಂಟೆಯಲ್ಲಿ ಕಾರ್ಯಾಚರಣೆ
2. ಬಂಧಿತರಿಂದ 21 ಲಕ್ಷದ ಚಿನ್ನಾಭರಣ ವಶ
3. ಹಾಸ್ಟೆಲ್ ವಾರ್ಡನ್ ಮನೆ ಕಳ್ಳತನ ಪ್ರಕರಣ
4. ಇಬ್ಬರು ಖತರ್ನಾಕ್ ಮನೆಗಳ್ಳರು ಈಗ ಪೊಲೀಸ್ ಅತಿಥಿ

ಬೆಳಗಾವಿ ಜಿಲ್ಲೆಯ ಕಟಕೋಳ ಪೊಲೀಸರು ಮನೆಗಳ್ಳತನ ಪ್ರಕರಣವೊಂದನ್ನು ಕೇವಲ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಮಹಿಳಾ ಹಾಸ್ಟೆಲ್ ವಾರ್ಡನ್ ಮನೆಯಲ್ಲಿ ನಡೆದಿದ್ದ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದ ಇಬ್ಬರು ಕಿಲಾಡಿ ಕಳ್ಳರನ್ನು ಜೈಲಿಗಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟೆ ನಿವಾಸಿ, ಹಾಸ್ಟೆಲ್ ವಾರ್ಡನ್ ಆಗಿರುವ ದಿಲ್‌ಶಾದ ನದಾಫ್ ಅವರ ಮನೆಯಲ್ಲಿ ಮೇ 5 ರಂದು ಭಾರಿ ಕಳ್ಳತನ ನಡೆದಿತ್ತು. ಈ ಬಗ್ಗೆ ಕಟಕೋಳ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಕೇವಲ 48 ಗಂಟೆಗಳ ಅವಧಿಯಲ್ಲಿ ಆರೋಪಿತರಾದ ಮೂಡಲಗಿ ತಾಲೂಕಿನ ಕಮಲದಿನ್ನಿ ನಿವಾಸಿ ಹಣಮಂತ ಯಲ್ಲಪ್ಪ ಮಾರಾಪೂರ (27) ಮತ್ತು ಹಸೀನಾ ಅಪ್ಪಾಸಾಬ ನದಾಫ್ (24) ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು 154.6 ಗ್ರಾಂ ತೂಕದ ಚಿನ್ನದ ಆಭರಣಗಳು, 45 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 21,13,810 ರೂಪಾಯಿ ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸ್‌ಐ ಬಸವರಾಜ ಕೊಣ್ಣೂರೆ ನೇತೃತ್ವದ ತಂಡದ ಈ ಕ್ಷಿಪ್ರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!