1. ಮುಧೋಳದಲ್ಲಿ ಅಪ್ಪನ ಕಣ್ಣೆದುರೇ ಮಗು ಸಾವು
2. ಬೈಕ್ ಮೇಲಿಂದ ಬಿದ್ದು ಟಾಟಾ ಏಸ್ ಅಡಿಗೆ
3. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಂದಮ್ಮನ ದುರಂತ ಅಂತ್ಯ
4. ನಾಲ್ಕು ವರ್ಷದ ಸುಶೀಲ್ ಶಿಂಧೆ ದಾರುಣ ಸಾವು

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಎದೆ ನಡುಗಿಸುವ ಘಟನೆಯೊಂದು ಸಂಭವಿಸಿದೆ. ಅಪ್ಪ ದಿನಸಿ ತರಲು ಹೋದ ಕೆಲವೇ ಕ್ಷಣಗಳಲ್ಲಿ, ಬೈಕ್ ಮೇಲೆ ಕುಳಿತಿದ್ದ ಪುಟ್ಟ ಕಂದಮ್ಮ ಯಮನ ಪಾಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಭೀಕರ ದೃಶ್ಯ ಕಲ್ಲು ಮನಸ್ಸಿನವರನ್ನೂ ಕಣ್ಣೀರು ಹಾಕಿಸುವಂತಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಗಾಂಧಿ ವೃತ್ತದ ಬಳಿ ಗುರುವಾರ ಮಧ್ಯಾಹ್ನ ಈ ಘೋರ ದುರಂತ ಸಂಭವಿಸಿದೆ. ಸುಶೀಲ್ ಶಿಂಧೆ (4) ಎಂಬ ಪುಟ್ಟ ಬಾಲಕ ಮೃತಪಟ್ಟ ದುರ್ದೈವಿ. ಬಾಲಕನ ತಂದೆ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ, ಮಗನನ್ನು ಅದರ ಮೇಲೆ ಕೂರಿಸಿ ದಿನಸಿ ಸಾಮಾನು ತರಲು ತೆರಳಿದ್ದರು. ಇದೇ ವೇಳೆ ರಸ್ತೆಯಲ್ಲಿ ಟಾಟಾ ಏಸ್ ವಾಹನವೊಂದು ಬರುತ್ತಿದ್ದಾಗ, ಬಾಲಕ ಆಯತಪ್ಪಿ ನೇರವಾಗಿ ವಾಹನದ ಹಿಂಬದಿ ಚಕ್ರದ ಕೆಳಗೆ ಬಿದ್ದಿದ್ದಾನೆ. ವಾಹನ ಮಗುವಿನ ಮೇಲೆ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸುಶೀಲ್‌ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. ಈ ಇಡೀ ಘಟನೆ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

