ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಬ್ರಿಡ್ಜ್ ಸಂಭ್ರಮ
ಮೇ 9 ಮತ್ತು 10 ರಂದು ಕ್ರೀಡಾಕೂಟ
ವಿವಿಧ ರಾಜ್ಯಗಳ ನೂರಾರು ಕ್ರೀಡಾಪಟುಗಳ ಆಗಮನ
ಒಂದು ಲಕ್ಷಕ್ಕೂ ಅಧಿಕ ನಗದು ಬಹುಮಾನ
ಬುದ್ಧಿವಂತರ ಆಟ ಎಂದೇ ಕರೆಯಲ್ಪಡುವ ‘ಬ್ರಿಡ್ಜ್’ ಕ್ರೀಡೆಯ ರಾಜ್ಯ ಮಟ್ಟದ ಟೂರ್ನಿಗೆ ಕುಂದಾನಗರಿ ಬೆಳಗಾವಿ ಆತಿಥ್ಯ ವಹಿಸುತ್ತಿದೆ. ಬೆಳಗಾವಿ ಜಿಲ್ಲಾ ಕಾಂಟ್ರಾಕ್ಟ್ ಬ್ರಿಡ್ಜ್ ಅಸೋಸಿಯೇಷನ್ ಹಾಗೂ ರಾಜ್ಯ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಮೇ 9 ಮತ್ತು 10 ರಂದು ಈ ಬೃಹತ್ ಕ್ರೀಡಾಕೂಟ ಆಯೋಜನೆಯಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಎಸ್.ವೈ. ಪ್ರಭು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿಯ ಖಾನಾಪುರ ರಸ್ತೆಯ ಹೋಟೆಲ್ ನೇಟಿವ್ ಇನ್‌ನಲ್ಲಿ ಎರಡು ದಿನಗಳ ಕಾಲ ಈ ರಾಜ್ಯ ಮಟ್ಟದ ಬ್ರಿಡ್ಜ್ ಟೂರ್ನಿ ನಡೆಯಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮುಂಬೈ, ಪುಣೆ, ಸಾತಾರಾ, ಸಾಂಗ್ಲಿ, ಕೊಲ್ಲಾಪುರ, ರತ್ನಗಿರಿ ಹಾಗೂ ಗೋವಾ ರಾಜ್ಯಗಳಿಂದ ನೂರಾರು ಅನುಭವೀ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಜೇತರಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಈ ಬಹುಮಾನಗಳನ್ನು ಕರ್ನಾಟಕ ಬ್ರಿಡ್ಜ್ ಅಸೋಸಿಯೇಷನ್ ಹಾಗೂ ಸಿದ್ಧಾರ್ಥ್ ಚಾಂದಗಡ್ಕರ್, ಅಭಿಜಿತ್ ಭಾಗವತ್ ಮತ್ತು ನಿತಿನ್ ಲೋಕೂರ್ ಅವರುಗಳು ತಮ್ಮ ಹಿರಿಯರ ಸ್ಮರಣಾರ್ಥ ಪ್ರಾಯೋಜಿಸಿದ್ದಾರೆ. ಬೈಟ್
ಬ್ರಿಡ್ಜ್ ಕೇವಲ ಇಸ್ಪೀಟ್ ಆಟವಲ್ಲ, ಇದು ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಸಂಘಟಿತ ಕಾರ್ಯವೈಖರಿಯನ್ನು ಹೆಚ್ಚಿಸುವ ಕ್ರೀಡೆಯಾಗಿದೆ. ಒಲಿಂಪಿಕ್ಸ್ ಮಟ್ಟದಲ್ಲೂ ಗುರುತಿಸಿಕೊಂಡಿರುವ ಈ ಆಟವು ಮೆದುಳಿಗೆ ಉತ್ತಮ ವ್ಯಾಯಾಮವಾಗಿದ್ದು, ವಯಸ್ಸಾದವರಲ್ಲಿ ಕಾಡುವ ಮರೆಗುಳಿತನ ಅಥವಾ ಅಲ್ಝೈಮರ್ಸ್‌ನಂತಹ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದರು. ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಟೂರ್ನಿ ಮಹತ್ವದ್ದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು ಭಾಗವಹಿಸುವಂತೆ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಎಂ.ಐ. ಹೆಗಡೆ, ಎನ್.ವ್ಹಿ ದೇಶಪಾಂಡೆ, ಆರ್.ಎಲ್. ಬರವೆ, ಸಂತೋಷ್ ಮಮದಾಪೂರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

