• ಸ್ವಾಮಿ ವಿವೇಕಾನಂದರ ಪಾವನ ಭೂಮಿಯಲ್ಲಿ ಉತ್ಸವ
• ಮೇ 8 ರಿಂದ 10 ರವರೆಗೆ ವಿವಿಧ ಕಾರ್ಯಕ್ರಮ
• ಸಂಗೀತಾ ಕಟ್ಟಿ, ರಘುನಂದನ್ ಪಣಶೀಕರ್ ಗಾಯನ
• ಖ್ಯಾತ ಸಿತಾರ್ ವಾದಕ ಪುರಬಯಾನ್ ಚಟರ್ಜಿ ಆಗಮನ
ಸ್ವಾಮಿ ವಿವೇಕಾನಂದರ ವಾಸ್ತವ್ಯದಿಂದ ಪುನೀತವಾದ ಬೆಳಗಾವಿಯ ಕೋಟೆಯ ಆವರಣದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮವು ಈಗ 25 ವರ್ಷಗಳನ್ನು ಪೂರೈಸಿದೆ. ಈ ಸವಿ ನೆನಪಿಗಾಗಿ ಮೇ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ಬೃಹತ್ ರಜತ ಮಹೋತ್ಸವವನ್ನು ಆಯೋಜಿಸಲಾಗಿದ್ದು, ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಕಲಾವಿದರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸ್ವಾಮಿ ವಿವೇಕಾನಂದರು 1892 ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದಾಗ ವಾಸ್ತವ್ಯ ಹೂಡಿದ್ದ ಕೋಟೆಯ ಹರಿಪಾದ ಮಿತ್ರ ಅವರ ನಿವಾಸದಲ್ಲಿ ಇಂದು ರಾಮಕೃಷ್ಣ ಮಿಷನ್ ಆಶ್ರಮ ಕಾರ್ಯನಿರ್ವಹಿಸುತ್ತಿದೆ. ಈ ಆಶ್ರಮದ ರಜತ ಮಹೋತ್ಸವವು ಬೆಲೂರು ಮಠದ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಮೊದಲ ದಿನವಾದ ಮೇ 8 ರಂದು ಶ್ರೀ ರಾಮಕೃಷ್ಣ ಮನನಮ್ ಕಾರ್ಯಕ್ರಮ, ಡಾ. ಎಸ್.ಪಿ. ಗುರುದಾಸ್ ಅವರಿಂದ ಹರಿಕಥೆ ಹಾಗೂ ಸಂಜೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಂದ ‘ಶರಣದಾಸ ವಾಣಿ’ ಸಂಗೀತ ಕಾರ್ಯಕ್ರಮ ಜರುಗಲಿದೆ.
ಎರಡನೇ ದಿನವಾದ ಮೇ 9 ರಂದು ಶಾರದಾ ದೇವಿ ಮನನಮ್ ಕುರಿತು ಉಪನ್ಯಾಸ, ರೋಹಿತ್ ಮಾನೆ ಅವರಿಂದ ನೃತ್ಯ ಹಾಗೂ ಸಂಜೆ ರಘುನಂದನ್ ಪಣಶೀಕರ್ ಅವರಿಂದ ಭಜನಾ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ದಿನವಾದ ಮೇ 10 ರಂದು ಸ್ವಾಮಿ ವಿವೇಕಾನಂದ ಮನನಮ್, ರಾಮಕೃಷ್ಣ ಹೋಮ ಹಾಗೂ ಸ್ವಾಮಿ ಸುಹಿತಾನಂದಜಿ ಅವರಿಂದ ಆಶೀರ್ವಚನ ಇರಲಿದೆ. ಮಧ್ಯಾಹ್ನ ಡಾ. ದತ್ತಾತ್ರೇಯ ವೇಲಣಕರ್ ಮತ್ತು ತಂಡದವರಿಂದ ಗೀತ ಗಾಯನ ಹಾಗೂ ಸಂಜೆ ಪಂಡಿತ್ ಪುರಬಯಾನ್ ಚಟರ್ಜಿ ಅವರ ಸಿತಾರ್ ವಾದನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಬೆಳಗಾವಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ ಮನವಿ ಮಾಡಿದ್ದಾರೆ.

