• ರುಕ್ಮಿಣಿ ನಗರದ ಚರಂಡಿಯಲ್ಲಿ ಹಾಲಿನ ಹೊಳೆ
• ಎರಡು ತಿಂಗಳಿಂದ ತೊಂದರೆಯಲ್ಲಿ ಜನತೆ
• ಕೆಟ್ಟ ವಾಸನೆಗೆ ಹೈರಾಣಾದ ಸ್ಥಳೀಯ ನಿವಾಸಿಗಳು
• ಎಲ್.ಆಂಡ್ ಟಿ-ಕೆಪಿಟಿಸಿಎಲ್ ಪರಸ್ಪರ ದೋಷಾರೋಪ!!!

ಬೆಳಗಾವಿಯ ರುಕ್ಮಿಣಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳೇ ಜನರಿಗೆ ಕಂಟಕವಾಗಿ ಪರಿಣಮಿಸಿವೆ. ಕಾಮಗಾರಿ ವೇಳೆ ಕೆ.ಎಂ.ಎಫ್ ಪೈಪ್ಲೈನ್ ಒಡೆದು ಚರಂಡಿಯಲ್ಲಿ ಹಾಲಿನ ನೀರು ಹರಿಯುತ್ತಿದ್ದು, ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಬೆಳಗಾವಿಯ ರುಕ್ಮೀಣಿ ನಗರದಲ್ಲಿ ಎಲ್.ಆಂಡ್ ಟಿ ಕಂಪನಿಯ ವತಿಯಿಂದ 24 ಗಂಟೆ ನೀರು ಪೂರೈಕೆಗೆ ಪೈಪಲೈನ್ ಅಳವಡಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಕೆಪಿಟಿಸಿಎಲ್’ನ ವತಿಯಿಂದ ಭೂಗತ ಕೇಬಲ್ ಅಳವಡಿಸಲು ಕೂಡ ಕಾಮಗಾರಿ ನಡೆಸಲಾಗುತ್ತಿದೆ. ಆದರೇ ಈ ನಡುವೆ ರಸ್ತೆಯನ್ನು ಅಗೆಯುವಾಗ ಕೆ.ಎಂ.ಎಫ್ ಹಾಲಿನ ಡೈರಿನ ಪೈಪಲೈನ್’ಗೆ ಧಕ್ಕೆಯಾಗಿ ಡೈರಿನ ಹಾಲು ಮಿಶ್ರಿತ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಈ ಹಿನ್ನೆಲೆ ರುಕ್ಮೀಣಿ ನಗರದ 9ನೇ ಕ್ರಾಸ್’ನ ಚರಂಡಿಯಲ್ಲಿ ಹಾಲಿನ ಹೊಳೆ ಹರಿಯುತ್ತಿದೆ.
ರುಕ್ಮೀಣಿ ನಗರದ 9ನೇ ಕ್ರಾಸ್’ನಲ್ಲಿ ಕಳೆದ 2 ತಿಂಗಳಿನಿಂದ ಕೆ.ಎಂ.ಎಫ್ ಡೈರಿಯ ಗಲೀಜು ನೀರು ಚರಂಡಿಗೆ ಸೇರುತ್ತಿದೆ. ಬೆಳಿಗ್ಗೆ ಗಲೀಜು ನೀರು ಹರಿದರೇ, ಸಂಜೆಯ ವೇಳೆ ಹಾಲಿನ ನೀರು ಚರಂಡಿಯಲ್ಲಿ ಹರಿಯುತ್ತಿದ್ದು, ಹಲವಾರು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಹಿಳೆಯರು, ಮಕ್ಕಳು, ವೃದ್ಧರು ಕೆಟ್ಟ ವಾಸನೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ಬಡವರ ಕಷ್ಟ ಕೇಳುವವರ್ಯಾರು ಎಂದು ಸ್ಥಳೀಯ ಮಹಿಳೆಯರು ಪ್ರಶ್ನಿಸಿದರು.
ಡೇರಿಯ ಗಲೀಜು ನೀರು ಚರಂಡಿಯಲ್ಲಿ ಹರಿಯುತ್ತಿದೆ. ಸಂಪೂರ್ಣ ಪರಿಸರ ಗಬ್ಬೆದ್ದು ನಾರುತ್ತಿದೆ. ಮೊದಲೇ ಬೇಸಿಗೆ ಬಿಸಿಲಿನ ತಾಪಕ್ಕೆ ಬೇಸತ್ತು ಗಾಳಿಗಾಗಿ ಹೊರ ಬಂದು ಕುಳಿತುಕೊಳ್ಳಬೇಕೆಂದರೇ, ಗಬ್ಬು ವಾಸನೆಗೆ ಮನೆ ಹೊರಗಡೆ ಬರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಮಹಿಳೆಯರು ತಮ್ಮ ಅಳಲನ್ನು ತೊಡಿಕೊಂಡರು.
ಹಲವಾರು ಬಾರಿ ಸಂಬಂಧಿಸಿದ ಎಲ್ಲರಿಗೂ ದೂರು ನೀಡಿದರೂ ಯಾರೂ ಕೂಡ ಬಂದು ಪರಿಶೀಲಿಸಿಲ್ಲ. ದಯವಿಟ್ಟು ಸಂಬಂಧಿಸಿದವರು ಬಂದು ಒಮ್ಮೆಯಾದರೂ ಪರಿಶೀಲಿಸಲಿ. ಮಹಾಪಾಲಿಕೆಯವರು ಬಂದು ಚರಂಡಿಯಿಂದ ಹೂಳು ತೆಗೆಯಬೇಕು. ಎಲ್.ಆಂಡ್ ಟಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ನೆಲವನ್ನು ಅಗೆದಿದ್ದು ಪೈಪ್’ಗೆ ಧಕ್ಕೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಾರೆ ಚರಂಡಿಯಲ್ಲಿ ನೀರಿನ ಬದಲೂ ಹಾಲು ಹರಿದರೂ ಅಲ್ಲಿ ಕಾಮಗಾರಿಯನ್ನು ಆರಂಭಿಸಿದ ಕೆಪಿಟಿಸಿಎಲ್ ಮತ್ತು ಎಲ್ ಆಂಡ್ ಟಿ ಒಬ್ಬರ ಕಡೆ ಇನ್ನೊಬ್ಬರು ಪರಸ್ಪರ ಬೊಟ್ಟು ಮಾಡುತ್ತಿದ್ದು, ಜನರ ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ವಿಪರ್ಯಾಸವೇ ಸರಿ.
