Belagavi

ಅರಿವಿನ ಬೆಳಕಿನಲ್ಲಿ ಸತ್ಯ ದರ್ಶನ ಮಾಡಿಸಿದವರು ಬಸವಣ್ಣ ಮತ್ತು ಕನಕದಾಸರು: ಕಾ.ತ.ಚಿಕ್ಕಣ

Share

ಬಸವಣ್ಣ ಮತ್ತು ಕನಕದಾಸರು ಸ್ಥಗಿತವಾದ ಸಮಾಜವನ್ನು ಚಲನಶೀಲಗೊಳಿಸಿ, ತಮ್ಮ ಅರಿವಿನ ಬೆಳಕಿನಲ್ಲಿ ಬದುಕಿನ ಸತ್ಯ ದರ್ಶನ ಮಾಡಿಸಿದರು ಎಂದು ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ. ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರು ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ
“ಬಸವಣ್ಣ ಮತ್ತು ಕನಕದಾಸರು : ಸಾಂಸ್ಕೃತಿಕ ನಾಯಕತ್ವ” ಎಂಬ ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರಲ್ಲಿ ಭಕ್ತಿಯೇ ಸ್ಥಾಯಿಭಾವವಾಗಿದ್ದರೂ ಕೂಡ ಅವರಲ್ಲಿ ಸಮಾಜದ ಚಿಂತನೆ ಮತ್ತು ಜ್ಞಾನೋಪಾಸನೆಯ ತುಡಿತವಿತ್ತು. ಬಸವಣ್ಣ ಹೆಚ್ಚು ಕ್ರಾಂತಿಕಾರಿ ಚಿಂತನೆಗಳನ್ನು ಮುಂದಿಟ್ಟರೆ, ಕನಕದಾಸರು ಭಕ್ತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾಗಿ, ಸಮಾಜ ಬದಲಾವಣೆಯ ಬತ್ತಿಗೆ ತೈಲವಾದವರು. ಇಬ್ಬರು ಹಚ್ಚಿದ ದೀಪ ಕರುಣೆ ಮತ್ತು ಪ್ರೀತಿ. ಇದು ಮನುಷ್ಯನನ್ನು ಗಾಢವಾಗಿ ಗಟ್ಟಿಗೊಳಿಸುತ್ತದೆ. ಸಮಕಾಲೀನ ಸಂದರ್ಭದ ಮಬ್ಬಿನ ದಾರಿಗೆ ಆ ಇಬ್ಬರೂ ಮಹನೀಯರ ತತ್ವ ಚಿಂತನೆಗಳು ನಮ್ಮನ್ನು ಬೆಳಕಿನೆಡೆಗೆ ಸಾಗಿಸಬಲ್ಲದು. ವಿನಯ ಮತ್ತು ವಿಶ್ವಾಸ ಅವರ ಬದುಕಿನ ದಾರಿಯ ದೀಪವಾಗಿದ್ದವು. ಹಾಗಾಗಿ ಅವರ ಬದುಕು ಅಷ್ಟು ಪ್ರಖರವಾಗಿತ್ತು.

ಉಳ್ಳವರು , ಬಲ್ಲವರು ಜಾತಿ ಮತ್ತು ಧರ್ಮದ ಮೂಲಕ ಚರಿತ್ರೆ ಕಟ್ಟಿದರು. ಕೆಳವರ್ಗದವರಿಗೊಂದು ಸಾಂಸ್ಕೃತಿಕ ಚರಿತ್ರೆಯಿತ್ತೆಂಬುದನ್ನು ಮರೆತಿದ್ದರು. ಅದನ್ನು ಕಟ್ಟುವ ರಾಜಕೀಯ ಶಕ್ತಿಯೂ ಅವರಲ್ಲಿ ಇಲ್ಲವಾಗಿತ್ತು. ಬಸವಣ್ಣ ಮತ್ತು ಕನಕದಾಸರು ತಳಸಮುದಾಯಗಳ ಚರಿತ್ರೆಯನ್ನು ಭಾಷೆ ಮತ್ತು ಸಂಸ್ಕೃತಿಯ ಮೂಲಕ ಕಟ್ಟಿದರು. ಇದು ನಾಡಿನ ಚರಿತ್ರೆಯಲ್ಲಿ ಆದ ಮಹಾಪಲ್ಲಟ ಎಂದರು.

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಆದ ಸಮಾಜದ ಜಾಗೃತಿ ಮತ್ತು ವೈಚಾರಿಕ ಪ್ರಜ್ಞೆಯನ್ನು ಕನಕದಾಸರು ಅದನ್ನು ಇನ್ನೊಂದು ಆಯಾಮಕ್ಕೆ ಒಯ್ದರು. ಮಧ್ಯಕಾಲದಲ್ಲಿ ಭಾರತಕ್ಕೆ ಪ್ರವೇಶ ಪಡೆದ ವಿದೇಶಿ ಸಂಸ್ಕೃತಿ ಮತ್ತು ಧರ್ಮದ ಪ್ರತಿರೋಧದ ನೆಲೆಯಲ್ಲಿ ಭಕ್ತಿ ಆಂದೋಲನವು ಪ್ರಖರವಾಗಿ ಬೆಳೆಯಿತು. ಈ ನೆಲದ ಸಂಸ್ಕೃತಿ ಮತ್ತು ಚರಿತ್ರೆಯನ್ನು ಶ್ರೀಮಂತಗೊಳಿಸುವಲ್ಲಿ ಬಸವಣ್ಣ ಮತ್ತು ಕನಕದಾಸರ ಪಾತ್ರ ದೊಡ್ಡದು.
ಇಬ್ಬರು ಮಹನೀಯರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿ, ಕದಡಿದ ಸಮಾಜವನ್ನು ತಿಳಿಗೊಳಿಸುವ, ಸಮಾಜವನ್ನು ಶುದ್ಧೀಕರಿಸುವ ಬಹುದೊಡ್ಡ ಕಾರ್ಯಕ್ಕೆ ಕೈ ಹಾಕಿದರು. ಇಬ್ಬರೂ ಶ್ರೇಷ್ಠ ತತ್ವಜ್ಞಾನಿಗಳು. ಅವರ ಚಿಂತನೆಗಳಿಗೆ ಅನುಸಂಧಾನವಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಅವರ ತತ್ವಗಳು ನಮ್ಮ
ಆತ್ಮೋನ್ನತಿ, ಆತ್ಮಶುದ್ಧತೆಗೊಳಿಸಲಿವೆ ಎಂದರು .

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ್ ಅವರು, ಬಸವಣ್ಣನವರು ಜಾತಿ ಸಂಘರ್ಷದ ತಳವನ್ನು ಅಲ್ಲಾಡಿಸಿ , ಹೊಸ ಸಮಾಜಕ್ಕಾಗಿ ದುಡಿದರು. ಬಸವಣ್ಣನ ದಾರಿಯಲ್ಲಿ ಸಾಗಿ ಬಂದವರು ಕನಕದಾಸರು. ಇಬ್ಬರ ಚಿಂತನೆಗಳು ಸಂದೇಶಗಳು ಸಾರ್ವಕಾಲಿಕವಾದವು. ಜನರಾಡುವ ಭಾಷೆಯನ್ನು ದೇವನೋಲಿಸುವ ಭಾಷೆಯನ್ನಾಗಿ ಮಾಡಿದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಎತ್ತಿ ಹಿಡಿದರು. ಕನ್ನಡ ನಾಡಿನ ಚರಿತ್ರೆಯ ಪುಟಗಳಲ್ಲಿ ಇಬ್ಬರದೂ ಅಳಿಸಲಾಗದ ಹೆಜ್ಜೆಗಳು. ಇಂದು ನಾವು ಕಾಣುವ ಈ ಸುಂದರ ಸಮಾಜ ಅವರು ಬಿತ್ತಿದ ಬೀಜ ಎಂದರು.

ವಿಚಾರ ಸಂಕಿರಣದ ಸಂಚಾಲಕ ಮತ್ತು ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ. ನಾಗರಾಜ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಸಮಕಾಲೀನ ಜಗತ್ತು ತುಂಬಾ ವಿಕ್ಷಿಪ್ತತೆಯಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣ ಮತ್ತು ಕನಕದಾಸರ ಮುಖಾಮುಖಿಯಾಗುವುದು ಅತ್ಯಂತ ಸುಸಂದರ್ಭ ಎಂದರು.

ಡಾ. ಜೋಗಿನಕಟ್ಟಿ ಪ್ರಿಯಾಂಕ ನಿರೂಪಿಸಿದರು, ಡಾ. ನಾರಾಯಣ ನಾಯ್ಕ ಪರಿಚಯಿಸಿದರು. ಧಾರವಾಡದ ವಿಶ್ವನಾಥ ಮತ್ತು ತಂಡದವರು ಪ್ರಾರ್ಥಿಸಿದರು. ಡಾ. ಮಹಾಂತೇಶ ದುರಗಣ್ಣವರ ವಂದಿಸಿದರು. ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!