NAVALAGUND

ಅಂಬಲಿ ಹಳ್ಳದ ಅಬ್ಬರಕ್ಕೆ ರೈತರ ಜಮೀನು ಜಲಾವೃತ, ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

Share

ಅಂಬಲಿ ಹಳ್ಳದ ಹೂಳಿನಿಂದ ರೈತರಿಗೆ ಸಂಕಷ್ಟ

ಜಮೀನುಗಳಿಗೆ ನುಗ್ಗಿದ ನೀರು; ಬೆಳೆ ಹಾನಿ

ತಡೆಗೋಡೆ ನಿರ್ಮಿಸಲು ನವಲಗುಂದ ರೈತರ ಪಟ್ಟು

ನೀರಾವರಿ ಇಲಾಖೆ ವಿರುದ್ಧ ಹೋರಾಟದ ಎಚ್ಚರಿಕೆ

ನವಲಗುಂದ: ಪಟ್ಟಣದ ಇಬ್ರಾಹಿಂಪುರ ರಸ್ತೆಗೆ ಹೊಂದಿಕೊಂಡಿರುವ ಅಂಬಲಿ ಹಳ್ಳವು ಮಳೆ ಬಂದ ಸಂದರ್ಭದಲ್ಲಿ ಹಳ್ಳದ ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸ್ಥಳೀಯ ರೈತರು ಅಂಬಲಿ ಹಳ್ಳದ ಪಕ್ಕದಲ್ಲಿರುವ ಸರ್ವೇ ನಂಬರ್‌ 144/1 ರಿಂದ 144/15 ರವರೆಗೆ ಹೊಂದಿರುವ ಜಮೀನುಗಳಿಗೆ ಹಳ್ಳದ ನೀರು ನುಗ್ಗುತ್ತಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಹಳ್ಳವನ್ನು ಸರಿಯಾಗಿ ಬಳಸದ ಕಾರಣ ಹೂಳು ಹಾಗೂ ಹಾಫ್ ತುಂಬಿದ್ದು , ನೀರು ಸರಾಗವಾಗಿ ಹರಿಯದೇ ಪಕ್ಕದ ಹೊಲಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಜಮೀನಿನ ಒಡ್ಡು ಒಡೆದು ಹೋಗುತ್ತಿವೆ. “ಈ ಹಳ್ಳದ ಪಕ್ಕದಲ್ಲಿ ಕೂಡಲೇ ತಡೆಗೋಡೆ ನಿರ್ಮಾಣ ಮಾಡಿದರೆ ಸಣ್ಣ ಹಿಡುವಳಿದಾರರ ಜಮೀನುಗಳು ಸಂಪೂರ್ಣವಾಗಿ ನಾಶವಾಗುವುದು ತಪ್ಪುತ್ತದೆ ಎಂದರು..

ಅಂಬಲಿ ಹಳ್ಳದ ಹೂಳು ತೆಗೆಯದ ಕಾರಣ ಹಾಗೂ ನೀರಿನ ಹರಿವಿನ ದಿಕ್ಕು ಬದಲಾಗಿರುವುದರಿಂದ, ನೀರು ನೇರವಾಗಿ ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದ ವರ್ಷಪೂರ್ತಿ ಕಷ್ಟಪಟ್ಟು ಕಟ್ಟಿದ ಒಡ್ಡುಗಳು ಕ್ಷಣಾರ್ಧದಲ್ಲಿ ಕೊಚ್ಚಿ ಹೋಗುತ್ತಿವೆ. ಕೇವಲ ಬೆಳೆಯಲ್ಲದೆ, ಫಲವತ್ತಾದ ಭೂಮಿಯೂ ಸವಕಳಿಯಾಗುತ್ತಿದ್ದು, ಸಣ್ಣ ಹಿಡುವಳಿದಾರರು ಬೀದಿಗೆ ಬರುವಂತಾಗಿದೆ, “ನಮ್ಮ ಸರ್ವೇ ನಂಬರ್‌ಗಳು ಹಳ್ಳದ ಪಕ್ಕದಲ್ಲೇ ಇವೆ. ಪ್ರತಿ ಬಾರಿ ಮಳೆ ಬಂದಾಗಲೂ ನಮಗೆ ನಷ್ಟ ತಪ್ಪಿದ್ದಲ್ಲ. ಇಲ್ಲಿ ವೈಜ್ಞಾನಿಕವಾಗಿ ಹಳ್ಳವನ್ನು ಸ್ವಚ್ಛಗೊಳಿಸಿಲ್ಲ ತಡೆಗೋಡೆ ನಿರ್ಮಿಸಿಲ್ಲ” ಎಂದು
ಸ್ಥಳೀಯ ರೈತರಾದ ಬಸವರಾಜ ಮಲ್ಲದಾಸರ, ಹನುಮಂತಪ್ಪ ಹುಳಕಣ್ಣವರ ಹಾಗೂ ರಾಜು ಅಳಗವಾಡಿ, ಸುರೇಶ ದೊಡ್ಡಮನಿ, ಮಾಬುಸಾಬ ಯರಗುಪ್ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಹಳ್ಳದ ಪಕ್ಕದಲ್ಲಿ ಭದ್ರವಾದ ತಡೆಗೋಡೆ ನಿರ್ಮಿಸದಿದ್ದರೆ ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಯ ಮುಂದೆ ಉಗ್ರ ಹೋರಾಟ ಮಾಡುವುದಾಗಿ ನೇರವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ…

Tags:

error: Content is protected !!