Belagavi

ಬೆಳಗಾವಿ: ಈಜಲು ಹೋದಾಗ ಗೋಡೆ ಕುಸಿದು ದುರಂತ; ಕಪಿಲೇಶ್ವರ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು• ಕಪಿಲೇಶ್ವರ ಹೊಂಡದಲ್ಲಿ ಗೋಡೆ ಕುಸಿದು ದುರಂತ

Share

• ಇಬ್ಬರು ಅಪ್ರಾಪ್ತ ಬಾಲಕರ ಕರುಣಾಜನಕ ಸಾವು
• ಪಾಲಕರ ಕಣ್ಣೆದುರೇ ಮಣ್ಣಾದ ಮಕ್ಕಳ ಬದುಕು
• ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಪಿಲೇಶ್ವರ ಮಂದಿರದ ಹಿಂಬದಿಯ ಹೊಂಡದಲ್ಲಿ ಗೋಡೆ ಕುಸಿದು ಈಜಲು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ಪಾಲಕರ ಕಣ್ಣೆದುರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಬೆಳಗಾವಿ ನಗರದ ಶಹಾಪೂರ ಜೇಡಗಲ್ಲಿಯ ಶಿವಂ ಪರಶುರಾಮ ಸುಂಡಿಕರ (07) ಹಾಗೂ ಛತ್ರಪತಿ ಶಿವಾಜಿ ನಗರದ ನಿವಾಸಿಗಳಾದ ಪರಶುರಾಮ ರಾಜು ನೀಲಜಕರ್ (11) ಮೃತಪಟ್ಟ ಬಾಲಕರು. ಭಾನುವಾರ ಮಧ್ಯಾಹ್ನ ರಜೆ ಇದ್ದ ಕಾರಣ ಕಪಿಲೇಶ್ವರ ಮಂದಿರದ ಹಿಂಬದಿಯ ಹೊಂಡಕ್ಕೆ ಈಜು ಮುಗಿಸಿ ಬರುವಾಗ ಗೋಡೆ ಕುಸಿದು ಈ ಅನಾಹುತ ಸಂಭವಿಸಿದೆ. ಕಲ್ಲುಗಳು ಮೈಮೇಲೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿಗಳು ಹರಸಾಹಸ ಪಟ್ಟು ಬಾಲಕರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಮುದ್ದಿನ ಮಕ್ಕಳನ್ನು ಕಳೆದುಕೊಂಡ ಪಾಲಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಬಾಲಕನ ತಂದೆ ಪರಶುರಾಮ್ ಸುಂಡಿಕರ ಅವರು, ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಈಜಲು ಬರುತ್ತೇವೆ. ಇಂದು ಕೂಡ ನಮ್ಮ ಮಕ್ಕಳು ಈಜಿ ಬಟ್ಟೆ ಧರಿಸಿ ಮಹಾದೇವ ಮಂದಿರದಲ್ಲಿ ದರ್ಶನ ಪಡೆದು, ನಂತರ ನನ್ನ ಆಲಂಗಿಸಿ ಅಪ್ಪಾ ನೀವು ತುಂಬಾ ಒಳ್ಳೆಯವರು ಎಂದು ಹೇಳಿದ. ಅಷ್ಟರಲ್ಲೇ ಗೋಡೆ ಕುಸಿದು ಎಲ್ಲರೂ ನೀರಿನೊಳಗೆ ಹೋದೆವು. ನಮ್ಮ ಮೇಲೆ ಕಲ್ಲುಗಳು ಬಿದ್ದವು ಎಂದು ತಮಗೆ ಮತ್ತು ಮಕ್ಕಳಿಗಾದ ಗಾಯಗಳನ್ನು ತೋರಿಸಿದರು. ಮಹಾನಗರ ಪಾಲಿಕೆಯೂ ಇದನ್ನ ಸರಿಯಾಗಿ ನಿರ್ವಹಿಸಬೇಕು. ಇಲ್ಲದಿದ್ದರೇ, ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

4 ಮಕ್ಕಳು ಈಜಿ ಹೊರ ಬಂದು ಕಟ್ಟೆಯ ಮೇಲೆ ನಿಂತಿದ್ದರು. ಅಷ್ಟರಲ್ಲೆ ಕಟ್ಟೆಯೂ ಕುಸಿದು ಬಿದ್ದಿದೆ. ಅದರಡಿ ನಾಲ್ವರು ಸಿಲುಕಿದ್ದಾರೆ. ಉಳಿದವರು ಈಜಿ ಹೊರ ಬಂದಿದ್ದಾರೆ. ಅದರೇ, ಶಿವಂ ಮತ್ತು ಪರಶುರಾಮ ನೀರಿನಲ್ಲಿಯೇ ಉಳಿದಿದ್ದಾರೆ. ಹೊಂಡದಲ್ಲಿ ಈಜುವುದನ್ನ ನಿಷೇಧಿಸಬೇಕು ಎಂದು ಭಾರತಿ ಪಾಟೀಲ್ ಹೇಳಿದರು.

 

ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:

error: Content is protected !!