• ಹುಣಸೀಕಟ್ಟಿ ಬಹಿಷ್ಕಾರದ ವಿರುದ್ಧ ದಾಖಲಾಯ್ತು ಎಫ್.ಐ.ಆರ್
• ಬಹಿಷ್ಕಾರ ಹಾಕಿದ ಹಿರಿಯರ ವಿರುದ್ಧ ಕ್ರಮ
• ಡಂಗುರ ಸಾರಿದ ಪ್ರಭು ಹೂಗಾರ ಮೇಲೆ ಕೇಸ್
• ಆರೋಪಿಗಳ ರಕ್ಷಣೆಗೆ ನಡೆದಿದೆಯೇ ಗುಪ್ತ ಸಂಚು?

ಬಾಗಲಕೋಟೆಯ ಜಮಖಂಡಿಯಲ್ಲಿ ಬರೀ 600 ರೂಪಾಯಿ ಪಟ್ಟಿ ಹಣಕ್ಕಾಗಿ ಏಳು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದ ದರ್ಪದ ಹಿರಿಯರಿಗೆ ಈಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಮಾನವೀಯ ಪದ್ಧತಿಯ ವಿರುದ್ಧ ಸುದ್ಧಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಈಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಜಾತ್ರೆಯ ಪಟ್ಟಿ ಹಣ ನೀಡದಿದ್ದಕ್ಕೆ ಏಳು ಕುಟುಂಬಗಳಿಗೆ ಊರಿಂದ ಬಹಿಷ್ಕಾರ ಹಾಕಿದ್ದ ಘಟನೆ ಈಗ ಕಾನೂನು ಸ್ವರೂಪ ಪಡೆದುಕೊಂಡಿದೆ. ಏಪ್ರಿಲ್ 5 ರಂದು ಹಿರಿಯರು ಸೇರಿ ಈ ಕುಟುಂಬಗಳನ್ನು ದೈವದಿಂದ ಹೊರಗಿಟ್ಟಿರುವುದಾಗಿ ಗ್ರಾಮದಲ್ಲಿ ಅಮಾನವೀಯವಾಗಿ ಡಂಗುರ ಸಾರಿಸಿದ್ದರು. ಈ ಏಳು ಕುಟುಂಬಗಳ ಮನೆಗೆ ಸ್ವಾಮೀಜಿಗಳು, ಪೂಜಾರಿಗಳು ಹೋಗುವಂತಿಲ್ಲ ಹಾಗೂ ಕಿರಾಣಿ ಅಂಗಡಿಗಳಲ್ಲಿ ಸಾಮಾನು ನೀಡಬಾರದು ಎಂದು ನಿರ್ಬಂಧ ಹೇರುವ ಮೂಲಕ ಕಿರುಕುಳ ನೀಡಲಾಗಿತ್ತು. ಈ ಕುರಿತು ವರದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಜಮಖಂಡಿಯ ಕಂದಾಯ ಅಧಿಕಾರಿ ಮಂಜುನಾಥ್ ಅವರು ನೀಡಿದ ದೂರಿನ ಅನ್ವಯ, ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈಗ ಅಧಿಕೃತವಾಗಿ ಎಫ್ಐಆರ್ (FIR) ದಾಖಲಾಗಿದೆ. ಗ್ರಾಮದಲ್ಲಿ ಬಹಿಷ್ಕಾರದ ಬಗ್ಗೆ ಡಂಗುರ ಸಾರಿದ್ದ ಪ್ರಭು ಹೂಗಾರ ಹಾಗೂ ಈ ಕೃತ್ಯಕ್ಕೆ ಪ್ರಚೋದನೆ ನೀಡಿದ್ದ ಇತರ ಹಿರಿಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ಸೀನಿಯರ್ ಟೆಕ್ನಿಷಿಯನ್ ಆಗಿರುವ ಯಲ್ಲಪ್ಪ ಛಗಣ್ಣವರ ಸೇರಿದಂತೆ ಇತರ ಸಂತ್ರಸ್ತ ಕುಟುಂಬಗಳು ತಮಗಾದ ಅವಮಾನದ ವಿರುದ್ಧ ಡಿಸಿ ಮತ್ತು ಎಸಿ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಆದರೆ, ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಕೇವಲ ಡಂಗುರ ಸಾರಿದ ವ್ಯಕ್ತಿಯ ಹೆಸರನ್ನು ಮಾತ್ರ ಸ್ಪಷ್ಟವಾಗಿ ಉಲ್ಲೇಖಿಸಿ, ಉಳಿದ ಪ್ರಭಾವಿಗಳನ್ನು ‘ಇತರರು’ ಎಂದು ಉಲ್ಲೇಖಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಹಿಷ್ಕಾರಕ್ಕೆ ಆದೇಶ ನೀಡಿದ ಪ್ರಮುಖ ಆರೋಪಿಗಳನ್ನು ಬಚಾವ್ ಮಾಡಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ತಮಗಾದ ಗೌರವದ ಧಕ್ಕೆಗೆ ಕೇವಲ ಸಮಾಧಾನದ ಸಭೆ ಸಾಲದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಯಲ್ಲಪ್ಪ ಹಾಗೂ ಸಂತ್ರಸ್ತ ಕುಟುಂಬಗಳು ಪಟ್ಟು ಹಿಡಿದಿವೆ.
