ಸಾಹಿತ್ಯವು ಎಡವೂ ಅಲ್ಲ, ಬಲವೂ ಅಲ್ಲ, ಅದು ಬದುಕಿನ ಚಿಂತನೆ. ವೈಚಾರಿಕ ಆಧ್ಯ ಪರಂಪರೆಯ ಮೂಲಕ ಪಡೆದ ಶಿಕ್ಷಣ ಅನ್ನವನ್ನು ಒದಗಿಸಬೇಕು, ಬರವಣಿಗೆ ಬದುಕನ್ನು ಕಟ್ಟಿಕೊಡಬೇಕು ಎಂದು ಡಾ. ಸತೀಶ ನಾಯ್ಕ ಅಭಿಪ್ರಾಯಪಟ್ಟರು.

ಮಾನವ ಬಂದುತ್ವ ವೇದಿಕೆ ಬೆಳಗಾವಿಯ ಕೇಂದ್ರ ಕಚೇರಿಯಲ್ಲಿ, ಯುವ ಬರಹಗಾರರ ವೇದಿಕೆ ಬೌದ್ಧ ಪೌರ್ಣಿಮೆ ಮತ್ತು ಕಾರ್ಮಿಕ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಶ್ರಮಿಕರ ಒಡನಾಡಿಗಳು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ಅವರು ಬುದ್ಧನಿಂದ ಆರಂಭವಾದ ಶ್ರಮಿಕರ ಹೋರಾಟದ ಬದುಕು ಇನ್ನೂ ಕೊನೆಗೊಂಡಿಲ್ಲ, ಬಸವಣ್ಣನವರು ಕಟ್ಟಿದ ಸಮ ಸಮಾಜದ ಕನಸು ಕೈಗೂಡಿಲ್ಲ, ಅಂಬೇಡ್ಕರ್ ಸಾಂವಿಧಾನಿಕ ಆಶಯಗಳು ಪೂರ್ಣಗೊಂಡಿಲ್ಲ, ಕಾರ್ಲ್ ಮಾರ್ಕ್ಸರ ಕಾರ್ಮಿಕರ ಪರವಾದ ಶ್ರಮ ಫಲ ನೀಡಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಚಂದರಗಿ ಅವರು ಮಾತನಾಡಿ ಯುವ ಬರಹಗಾರರಿಗೆ ಪ್ರಶ್ನಿಸುವ ಮನೋಭಾವ ಮತ್ತು ಬದ್ಧತೆ ಇರಬೇಕು. ಬರವಣಿಗೆಯ ಶಕ್ತಿ ಅಗಾಧವಾದದ್ದು, ಅದರ ಆಂತರ್ಯವನ್ನು ಅರಿತುಕೊಂಡು ಸಾಹಿತ್ಯ ಕೃಷಿ ಮಾಡಿದರೆ ಪ್ರಶಸ್ತಿ ಮತ್ತು ಪದವಿಗಳಿಗಾಗಿ ಅರ್ಜಿ ಹಾಕಬೇಕಾದ ಅನಿವಾರ್ಯತೆ ಒದಗಿ ಬರಲಾರದು, ಸಾಹಿತಿಯಾದವನು ಸಮಾಜದ ಸಮಸ್ಯೆಗಳೊಂದಿಗೆ ಸ್ಪಂದಿಸಬೇಕು, ಸಮ ಸಮಾಜದ ಕಲ್ಪನೆಗೆ ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳಿಂದ ಪ್ರೇರಿತರಾಗಿ ಯುವಕರು ಶ್ರಮಿಕರ ಧ್ವನಿ ಆಗಬೇಕೆಂದು ಮಾತನಾಡಿದರು.
ಕಾರ್ಯಕ್ರಮದ ಆಶಯ ನುಡಿಗಳನಾಡಿದ ಡಾ. ಗೌತಮ ಮಾಳಗೆ ಅವರು ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳು ಯುವಸಮುದಾಯಕ್ಕೆ ಹೊಸ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡು ವೈಚಾರಿಕ ಬರವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ. ದೇಮಣ್ಣ ಸೊಗಲದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಾಮ ತಳವಾರ, ಕುಮಾರ ಬ. ತಳವಾರ, ಡಾ ನೀಲಪ್ಪ ವಾಲಿಕಾರ, ಡಾ. ಸುನೀಲಕುಮಾರ, ಶ್ರೀ ಪ್ರಕಾಶ್ ಮಬನೂರ, ಡಾ. ಅಪ್ಪಣ್ಣ ಜಿರನಾಳ, ಡಾ ರುದ್ರಪ್ಪ ಅರಳಿಮಟ್ಟಿ, ಶ್ರೀ ಎಂ.ಪಿ. ಬಿರಾದಾರ, ಶ್ರೀ ಪ್ರಕಾಶ ಬೊಮ್ಮನ್ನವರ, ಶ್ರೀಮತಿ ಸಾವಕ್ಕ ದೊಡಮನಿ ಹಾಗೂ ಇತರರು ಹಾಜರಿದ್ದರು.
ಡಾ. ಅ.ಬ. ಇಟಗಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನಾಡಿದರು. ಡಾ. ಬಾಲಕೃಷ್ಣ ನಾಯಕ ಹಾಗೂ ಸಂಗಡಿಗರು ಕಾರ್ಮಿಕ ಗೀತೆಯನ್ನು ಹಾಡಿದರು. ಡಾ. ಮಂಜುನಾಥ ಪಾಟೀಲ ವಂದಿಸಿದರು. ಕು. ಸುನಿತಾ ಬ್ಯಾಳಿ ನಿರೂಪಿಸಿದರು.
