ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಬಾಲ್ಯವಿವಾಹವನ್ನು ‘ಅಕ್ಕ ಪಡೆ’ ಮತ್ತು ಮಕ್ಕಳ ರಕ್ಷಣಾ ಘಟಕದವರು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ತಡೆದಿದ್ದಾರೆ. 13 ವರ್ಷದ ಬಾಲಕಿಯ ಭವಿಷ್ಯ ಹಾಳಾಗುವುದನ್ನು ತಪ್ಪಿಸಿದ ಪೊಲೀಸ್ ತಂಡ, ಈಗ ಬಾಲಕಿಯ ತಂದೆಯನ್ನೇ ಜೈಲಿಗಟ್ಟಿದೆ.

ಬೆಳಗಾವಿ ನಗರದ ಶಹಪೂರದ ಶಾಸ್ತ್ರಿ ನಗರದಲ್ಲಿ 13 ವರ್ಷದ ಬಾಲಕಿಯೊಬ್ಬಳಿಗೆ ಮೂಡಲಗಿ ಮೂಲದ ವ್ಯಕ್ತಿಯೊಂದಿಗೆ ವಿವಾಹ ಮಾಡಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳಗಾವಿ ಪೊಲೀಸರ ವಿಶೇಷ ‘ಅಕ್ಕ ಪಡೆ’ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜಂಟಿಯಾಗಿ ಬಾಲಕಿಯ ಮನೆಗೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಬಾಲಕಿಯ ಅಸಲಿ ವಯಸ್ಸು ಕೇವಲ 13 ವರ್ಷ ಎಂಬುದು ದೃಢಪಟ್ಟಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ತಂಡ ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.

ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ ಪಿ. ನಿಂಬಾಳಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯ ನಂತರ, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಬಾಲ್ಯವಿವಾಹಕ್ಕೆ ಮುಂದಾಗಿದ್ದ ತಂದೆಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅಕ್ಕ ಪಡೆಯ ರೇಣುಕಾ ಕಡಲಗಿ ಸೇರಿದಂತೆ ಇಡೀ ತಂಡದ ಸಾಹಸಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
