ಬೆಳಗಾವಿಯ ಅನಗೋಳದಲ್ಲಿ ನಡೆದಿದ್ದ ಭಾರೀ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ತಿಲಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಗೆಲಸದ ಮಹಿಳೆಯೇ ಸಂಚು ರೂಪಿಸಿ ಕಳ್ಳತನ ಮಾಡಿದ್ದ ಪ್ರಕರಣ ಇದಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಬೆಳಗಾವಿ ನಗರದ ಅನಗೋಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿಲಕವಾಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಜ್ವಲಾ ರವಿ ಕಮ್ಮಾರ ಹಾಗೂ ಶಿವಾ ಶಂಕರ ಅಪ್ಪಯನವರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 110.49 ಗ್ರಾಂ ತೂಕದ ಚಿನ್ನದ ಪಾಟಿ, ನೆಕ್ಲೇಸ್, ಉಂಗುರ ಸೇರಿದಂತೆ ಅಂದಾಜು 16,57,350 ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡವು ಈ ಭೇಟೆ ನಡೆಸಿದ್ದು, ತಾಂತ್ರಿಕ ವಿಭಾಗದ ನೆರವಿನಿಂದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಮಯಪ್ರಜ್ಞೆ ಮೆರೆದ ಇಡೀ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಪೊಲೀಸ್ ಆಯುಕ್ತರು, ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.
