ಬೆಳಗಾವಿ ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿತ್ತು.


ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ಮಹಾಪೌರರಾದ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಮಹಾನಗರದಲ್ಲಿ ಉಂಟಾದ ನೀರಿನ ಸಮಸ್ಯೆಯನ್ನು ನೀಗಿಸಲು ನಗರ ನೀರು ಸರಬರಾಜು ಮಂಡಳಿ ಮತ್ತು ಎಲ್. ಆಂಡ್ ಟಿ ಕಂಪನಿಯ ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಲಾಗಿತ್ತು. ಸಭೆಯಲ್ಲಿ ನಗರಸೇವಕರು ಜನರಿಗೆ ನೀರಿನ ಸರಬರಾಜುವಿನಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರೂ. ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಅವಶ್ಯಕತೆಯಿದ್ದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು. ಅಲ್ಲದೇ ವಿವಿಧ ಕಾಮಗಾರಿಗಳಿಗೆ ಅಗೆಯಲಾದ ಗುಂಡಿಗಳನ್ನು ಮುಚ್ಚಲು ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಈ ವೇಳೆ ಅಧಿಕಾರಿಗಳು ಮೇ ತಿಂಗಳೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವ ಭರವಸೆಯನ್ನು ನೀಡಿದರು.
ಇನ್ನು ನಾಮನಿದೇರ್ಶಿತ ನಗರಸೇವಕ ದಿನೇಶ್ ನಾಶಿಪುಡಿ ಅವರು ಎಲ್.ಆಂಡ್ ಟಿ ಕಂಪನಿಯೂ ಕಾಮಗಾರಿಗಳನ್ನು ಷರತ್ತುಗಳನ್ನು ಗಾಳಿಗೆ ತೂರಿ ಮಾಡುತ್ತಿದೆ. ಕಳಪೆಮಟ್ಟದ ಪೈಪ್’ಗಳ ಬಳಕೆ ಮಾಡಲಾಗಿದೆ. ಈ ಹಿನ್ನೆಲೆ ದಂಡ ವಿಧಿಸಬೇಕೆಂದು ಆಗ್ರಹಿಸಿದರು. ಅದೇ ರೀತಿ ನಗರಸೇವಕಿ ಸಾರಿಕಾ ಪಾಟೀಲ್ ಸೇರಿದಂತೆ ಇನ್ನುಳಿದ ನಗರಸೇವಕರು ತಮ್ಮ ವಾರ್ಡಿನಲ್ಲಿನ ನಲ್ಲಿಗಳ ಸಮಸ್ಯೆ ಮತ್ತು ಬೋರವೆಲ್’ಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಹಾಪೌರರು ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನಿಗಾವಹಿಸಿ ಕೆಲಸ ನಿರ್ವಹಿಸಬೇಕೆಂದು ಆದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಮಹಾಪೌರ ಹನುಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕ ಸಂತೋಷ್ ಪಡಣೇಕರ, ಸ್ಥಾಯಿ ಸಮಿತಿ ಅಧ್ಯಕ್ಷರು, ವಿಪಕ್ಷ ಸದಸ್ಯರು, ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ.,ಉಪಾಯುಕ್ತರು, ಅಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.
