Vijaypura

ಜ್ಯೋತಿಬಾ ದೇವಸ್ಥಾನದ ರಜತ ಮಹೋತ್ಸವ; ದೀಪ ಬೆಳಗಿಸಿ ಕೃತಾರ್ಥರಾದ ಭಕ್ತ ಗಣ

Share

ಜಲ,ನೆಲ ಹಾಗೂ ಭಾಷೆಯ ಭಿನ್ನಾಭಿಪ್ರಾಯವಿದ್ದರೂ ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದ ಜೊತೆಗೆ ಕರ್ನಾಟಕವು ವ್ಯಯಕ್ತಿಕ,ವ್ಯಾಪಾರ ಹಾಗೂ ಧಾರ್ಮಿಕ ವಾಗಿ ಉತ್ತಮ ಬಾಂಧವ್ಯ ಹೊಂದಿದೆ. ಅದರಲ್ಲೂ ಧಾರ್ಮಿಕವಾಗಿ ಹೇಳೊದಾದ್ರೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಮಹಾರಾಷ್ಟ್ಟದಲ್ಲಿರುವ ಹಲವು ದೇವತೆಗಳ ದರ್ಶನ ಪಡೆಯಲು ತೆರಳುತ್ತಾರೆ. ಮಹಾರಾಷ್ಟ್ರದ ಹಲವು ದೇವಸ್ಥಾನಗಳು ಕರ್ನಾಟಕದಲ್ಲಿವೆ. ಹೀಗೆಯೇ ಐತಿಹಾಸಿಕ ನಗರಿ ವಿಜಯಪುರ ನಗರದಲ್ಲಿ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಜೀರ್ಣೋದ್ಧಾರ ಮಾಡಲಾದ ದೇವಸ್ಥಾನಕ್ಕೀಗ ರಜತ ಮಹೋತ್ಸವದ ಸಂಭ್ರಮ‌. ಈ ಕುರಿತು ಇಲ್ಲಿದೆ ಡಿಟೇಲ್ಸ್

ಆ ದೇವರ ಹೆಸರು ಜ್ಯೋತಿಬಾ ದೇವರು. ಜ್ಯೋತಿಬಾ ದೇವಸ್ಥಾನವು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ವಾಡಿ ರತ್ನಗಿರಿ ಸಮೀಪವಿರುವ ಪ್ರಸಿದ್ಧ ಬೆಟ್ಟದ ಮೇಲಿನ (ಜ್ಯೋತಿಬಾ ಡೊಂಗರ್) ದೇವಾಲಯ ಇದಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಅವತಾರವೆಂದು ನಂಬಲಾದ ಜ್ಯೋತಿಬಾಗೆ (ಕೇದಾರನಾಥ) ಸಮರ್ಪಿತವಾದ ಈ ದೇವಾಲಯವು ಮಹಾಲಕ್ಷ್ಮಿಯ ರಕ್ಷಣೆಗೆ ಬಂದಿದ್ದನೆಂಬ ಪುರಾಣ ಕಥೆಯನ್ನು ಹೊಂದಿದೆ. ಈ ದೇವಾಲಯವನ್ನು 1730 ರಲ್ಲಿ ನವಜಿ ಸಯಾ ಎಂಬವರು ನಿರ್ಮಿಸಿದರು. ಇದು ಸಮುದ್ರ ಮಟ್ಟದಿಂದ ಸುಮಾರು 3124 ಅಡಿ ಎತ್ತರದಲ್ಲಿದೆ. ಇನ್ನೂ ಚೈತ್ರ ಮಾಸದ ಹುಣ್ಣಿಮೆಯಂದು ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಭಕ್ತರು ‘ಸಾಶನ್ ಕಾಟಿ’ ಗಳೊಂದಿಗೆ ಬಂದು ಗುಲಾಲ್ ಎರಚುತ್ತಾರೆ, ಇದರಿಂದ ಬೆಟ್ಟವೇ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇತ್ತ ಐತಿಹಾಸಿಕ ವಿಜಯಪುರ ನಗರದ ಶಿವಾಜಿ ವೃತ್ತದ ಬಳಿ ಇರುವ ಜ್ಯೋತಿಬಾ ದೇವಸ್ಥಾನಕ್ಕೆ ಅಪಾರ ಭಕ್ತರು ಆಗಮಿಸುತ್ತಾರೆ. ಇದೀಗ ಈ ದೇವಸ್ಥಾನಕ್ಕೆ ಬೆಳ್ಳಿ‌ ಮಹೋತ್ಸವದ ಸಂಭ್ರಮದಲ್ಲಿ ದೇವಸ್ಥಾನ ಕಮೀಟಿ ಈ ಬಾರಿ ಅತಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬೆಳ್ಳಿ ಹಬ್ಬವನ್ನು ಸ್ಮರಣೀಯವಾಗಿಸುವ ಯೋಜನೆ ಹಾಕಿಕೊಂಡಿದೆ.

ಇನ್ನೂ ವಿಜಯಪುರ ನಗರದ ಜಾತಿ ಬೇಧವಿಲ್ಲದೇ ಈ ದೇವರಿಗೆ ನಡೆದುಕೊಳ್ಳುವ ಭಕ್ತ ಗಣ ಇದ್ದು ಪ್ರಮುಖವಾಗಿ ಮರಾಠಾ ಸಮಾಜದ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಜತ ಮಹೋತ್ಸವದ ಹಿನ್ನಲೆಯಲ್ಲಿ ದಿನಾಂಕ 25 ಹಾಗೂ26 ರಂದು ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಜ್ಯೋತಿಬಾ ಮೂರ್ತಿ ಹೊತ್ತ ಪಲ್ಲಕ್ಕಿಯು ವಿಜಯಪುರ ನಗರದಿಂದ ಮದಬಾವಿ ಗ್ರಾಮಕ್ಕೆ ತೆರಳಿ ಅಲ್ಲಿಂದ ವಿಜಯಪುರ ನಗರಕ್ಕೆ ಮರಳಿ ಬರುತ್ತದೆ‌. ಈ ವೇಳೆ ಭವ್ಯ ಮತ್ತು ವೈಭವಮಯ ಮೆರವಣಿಗೆ ಆಯೋಜಿಸ ಲಾಗಿರುತ್ತದೆ. ಪಲ್ಲಕ್ಕಿ ಮೆರವಣಿಗೆಯು ನಗರದ ಕೊರಿಶೆಟ್ಟಿ ತೋಟ ಹಾಗೂ ಇಬ್ರಾಹಿಂ ರೋಜಾದಿಂದ ಮೆರವಣಿಗೆ ವಿವಿಧ ಕಡೆ ಸಂಚರಿಸಿ ದೇವಸ್ಥಾನದವರೆಗೆ ಸಾಗುತ್ತದೆ. ಆಗ ಸಾಂಪ್ರದಾಯಿಕ ವಾದ್ಯಗೋಷ್ಠಿ, ಭಕ್ತರ ಜಯಘೋಷ ಮತ್ತು ಭಕ್ತಿಭಾವದ ಮಧ್ಯೆ ಮೆರವಣಿಗೆ ವಾತಾವರಣವನ್ನೆ ಸೃಷ್ಟಿಸುತ್ತದೆ. ಇನ್ನೂ ಈ ಬಾರಿ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಿಯ ಭಾವರಂಗದಲ್ಲಿ ಜ್ಯೋತಿಬಾ ನಾಮಸ್ಮರಣೆ ಮೊಳಗಲು ವೇದಿಕೆ ಸಿದ್ಧವಾಗಿದೆ. ಜ್ಯೋತಿಬಾ ಭಕ್ತರಿಗಾಗಿ ಇದು ಕೇವಲ ಜಾತ್ರೆಯಾಗದೇ, ಭಕ್ತಿ, ಪರಂಪರೆ ಮತ್ತು ಸಮುದಾಯ ಏಕತೆಯ ಮಹೋತ್ಸವವಾಗಿದೆ. ಸಾಯಂಕಾಲ ಸಾಯಂಕಾಲ 6 ಗಂಟೆಗೆ ದೀಪೋತ್ಸವ ನಡೆಯಿತು. ಈ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ದೀಪ ಬೆಳಗಿಸಿದರು. ಅನ್ನಪ್ರಸಾದ ವಿತರಣೆ ನಡೆಯಿತು. ಇನ್ನೂ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಅಲಂಕೃತ ಗೋಪುರ ನಿರ್ಮಾಣ, ಗೋಪುರ ನಿರ್ಮಾಣದ ಬಳಿಕ ಕಳಸ ಪ್ರತಿಷ್ಢಾಪನೆ ಮಾಡಲು ನಿರ್ಧರಿಸಲಾಗಿದೆ. ಇನ್ನೂ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಾಜಿ ಗಾಯಕವಾಡ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು.

ಒಟ್ಟಾರೆ ವಿಜಯಪುರ ನಗರದಲ್ಲಿ ಜ್ಯೋತಿಬಾ ದೇವಸ್ಥಾನದ ರಜತ ಮಹೋತ್ಸವ ವಿಶಿಷ್ಟವಾಗಿ ಭಕ್ತಿ ಸಂಗಮವಾಗಿ ಸಡಗರ ಸಂಭ್ರಮದಿಂದ ಜರುಗಿತು.

Tags:

error: Content is protected !!