ಕಾಗವಾಡ ತಾಲೂಕಿನ ಲೋಕೂರ ಹಾಗೂ ಶೇಡಬಾಳ ಪರಿಸರದಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಮಳೆಯಿಂದಾಗಿ ದ್ರಾಕ್ಷಿ, ಪೇರಲ, ನುಗ್ಗೆ, ಬದನೆ, ಟೊಮೆಟೊ ಹಾಗೂ ಕಬ್ಬು ಮುಂತಾದ ಬೆಳೆಗಳಿಗೆ ಅಪಾರ ಹಾನಿಯಾಗಿತ್ತು. ಈ ಕುರಿತು ‘ಇನ್ ನ್ಯೂಸ್’ ವಾಹಿನಿಯಲ್ಲಿ ಸವಿಸ್ತಾರವಾದ ವರದಿಯನ್ನು ಪ್ರಸಾರ ಮಾಡಲಾಗಿತ್ತು. ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಇದರಿಂದ ಸ್ಥಳೀಯ ರೈತರು ‘ಇನ್ ನ್ಯೂಸ್’ ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದಾಗಿ ಗದ್ದೆಗಳಲ್ಲಿ ಆಲಿಕಲ್ಲುಗಳು ರಾಶಿಯಾಗಿ ಬಿದ್ದಿದ್ದವು. ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆಯ ಬಳಿಕ, ಮರುದಿನ ಮಧ್ಯಾಹ್ನ 2 ಗಂಟೆಯಾದರೂ ಆಲಿಕಲ್ಲುಗಳು ಕರಗದೇ ಹಾಗೆಯೇ ಉಳಿದಿದ್ದವು. ಈ ಕುರಿತು ಲೋಕೂರ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ ಗಡಗೆ ಅವರು ಮಾಹಿತಿ ನೀಡುತ್ತಾ, “ಇಂತಹ ಘಟನೆ ಅಪರೂಪವಾಗಿದ್ದು, ಪ್ರಕೃತಿ ವೈಪರೀತ್ಯದ ತೀವ್ರತೆಯನ್ನು ಇದು ತೋರಿಸುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಗವಾಡ ತಾಲೂಕು ಕೃಷಿ ಅಧಿಕಾರಿ ಕಾಂತಿನಾಥ್ ಬಿರಾದಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಅರುಣ್ ಕುಮಾರ್ ಹಿಡಕಲ್ ಹಾಗೂ ಗ್ರಾಮ ಆಡಳಿತಾಧಿಕಾರಿ ಸುಮಿತ್ರಾ ಖಿಲಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿದರು.
ಕೃಷಿ ಅಧಿಕಾರಿ ಕಾಂತಿನಾಥ್ ಬಿರಾದಾರ್ ಅವರ ಪ್ರಕಾರ, ಸುಮಾರು 200 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಗಳ ಎಲೆಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಇದಕ್ಕೆ ಪರಿಹಾರವಾಗಿ, ಪ್ರತಿ ಎಕರೆಗೆ 50 ಕೆಜಿ ಯೂರಿಯಾ ಗೊಬ್ಬರವನ್ನು ಹಾಕಲು ಹಾಗೂ ’13:0:45′ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಲು ರೈತರಿಗೆ ಸಲಹೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಸುಮಾರು 25 ಎಕರೆ ದ್ರಾಕ್ಷಿ, 6 ಎಕರೆ ಪೇರಲ, 10 ಎಕರೆ ನುಗ್ಗೆ, 5 ಎಕರೆ ಮೆಣಸಿನಕಾಯಿ, 1 ಎಕರೆ ಬದನೆ ಹಾಗೂ 1 ಎಕರೆ ಟೊಮೆಟೊ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿದೆ. ಅಧಿಕಾರಿಗಳ ಈ ತ್ವರಿತ ಕ್ರಮದಿಂದ ರೈತರು ತೃಪ್ತಿ ವ್ಯಕ್ತಪಡಿಸಿದ್ದು, ಇನ್ ನ್ಯೂಸ್ ವಾಹಿನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
