Kagawad

ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ವಿಶಾಲವಾದ ಮರ ಉರಳಿ ಕೆಳಗೆ ಸಿಲುಕಿದ ಎಮ್ಮೆ ಸಾವನಪ್ಪಿದ ಘಟನೆ ಸಂಭವಿಸಿದೆ.

Share

ಗುರುವಾರ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಶೇಡಬಾಳ ಪಟ್ಟಣದಲ್ಲಿ ವಿಶಾಲವಾದ ಮರ ಧರೆಗೆ ಉರುಳಿ, ಅದರ ಕೆಳಗೆ ಸಿಲುಕಿದ ಪರಿಣಾಮ ಸುಮಾರು ೨ ಲಕ್ಷ ರೂಪಾಯಿ ಮೌಲ್ಯದ ಎಮ್ಮೆ ಸಾವನಪ್ಪಿದ ಘಟನೆ ಸಂಭವಿಸಿದೆ.

ಶೇಡಬಾಳದ ಮಹಾವೀರ ಬಾಪು ಸಮಾಜ್ ಅವರ ಮನೆಯ ಎದುರು ಸುಮಾರು ೩೦ ವರ್ಷದ ದೊಡ್ಡ ಮರ ಬಿರುಗಾಳಿಯಲ್ಲಿ ಮುರುಳಿದೆ. ಮರದ ಕೆಳಗೆ ಮೂರು ಎಮ್ಮೆಗಳನ್ನು ಕಟ್ಟಲಾಗಿದ್ದು, ಅದರಲ್ಲಿ ಒಂದು ಎಮ್ಮೆ ಮೇಲೆ ಮರದ ಮುಖ್ಯ ಭಾಗ ಬಿದ್ದು ಸಿಲುಕಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ಘಟನೆಯಿಂದ ಮಹಾವೀರ ಸಮಾಜ್ ಹಾಗೂ ಅವರ ಧರ್ಮಪತ್ನಿ ತೀವ್ರ ದುಃಖಕ್ಕೆ ಒಳಗಾಗಿದ್ದು, ಮೃತಪಟ್ಟ ಎಮ್ಮಿಗೆ ಆರತಿ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಹಲವು ವರ್ಷಗಳಿಂದ ಕುಟುಂಬಕ್ಕೆ ಆಧಾರವಾಗಿದ್ದ ಈ ಎಮ್ಮೆ ಪ್ರತಿದಿನ ಸುಮಾರು ೧೫ ಲೀಟರ್ ಹಾಲು ನೀಡುತ್ತಿತ್ತು ಎಂದು ಅವರು ತಿಳಿಸಿದರು.

ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ನಷ್ಟ ಅನುಭವಿಸಿರುವುದರಿಂದ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಶೇಡಬಾಳ ಗ್ರಾಮ ಲೆಕ್ಕಾಧಿಕಾರಿ ಕೆ.ಪಿ. ಬಡಿಗೇರ್, ಪಶುವೈದ್ಯಾಧಿಕಾರಿ ತಾತ್ಯಾಸಾಹೇಬ್ ಪಾಟೀಲ್, ರಾಜು ಅಳಮಲ್ಲಿ, ಪಟ್ಟಣ ಪಂಚಾಯಿತಿ ಸದಸ್ಯ ಬಾಬು ಐನಾಪುರೆ ಹಾಗೂ ಬಾಪುಸಾಹೇಬ ಸಮಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೈಸರ್ಗಿಕ ವಿಕೋಪದಿಂದ ಎಮ್ಮೆ ಸಾವನ್ನಪ್ಪಿರುವ ಕುರಿತು ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಘಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ರೈತರು ದುಃಖ ವ್ಯಕ್ತಪಡಿಸಿ ಸಂತಾಪ ಸೂಚಿಸಿದರು.

Tags:

error: Content is protected !!