ಬೆಳಗಾವಿ ನಗರದ ವಿವಿಧೆಡೆ ಮನೆಗಳ್ಳತನ ಮಾಡಿ ಅತಂಕ ಸೃಷ್ಟಿಸಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ಗೆ ಸಿಟಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬರೋಬ್ಬರಿ 67 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು, 11 ಕೇಸ್ ದಾಖಲಿಸಿ ಐವರ ಕಳ್ಳರ ಹೆಡೆಮುರಿ ಕಟ್ಟಿದ ತಂಡಕ್ಕೆ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಭರ್ಜರಿ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ ಬೆಳಗಾವಿಗರು ಲಾಕ್ ಹೌಸ್ ಬೀಟ್ ಸಿಸ್ಟಮ್ ಅನುಸರಿಸಲು ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾತನಾಡಿದರು. ಬೆಳಗಾವಿಯ ಅಮನ್ ನಗರ, ಉಜ್ವಲ್ ನಗರ, ಮಾರುತಿ ನಗರ, ಶಾಹೂ ನಗರ ಮತ್ತು ವೀರಭದ್ರ ನಗರಗಳಲ್ಲಿ ಹಲವಾರು ಮನೆಗಳ್ಳತನದ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಡಿಸಿಪಿ ಕ್ರೈಂ ವಿಶೇಷ ತಂಡವನ್ನು ರಚಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರಿಹಾನ್ ದಫೇದಾರ, ಮಲ್ಲಿಕ್ ಹುಬ್ಬಳ್ಳಿ, ಅರ್ಮಾನ್ ಶೇಖ್, ಖಲೀಲ್ ಹುಬ್ಬಳ್ಳಿ ಮತ್ತು ಶಾಹನವಾಜ್ ಪಠಾಣ್ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ 415 ಗ್ರಾಂ ಚಿನ್ನ, 1 ಕಿಲೋ 329 ಗ್ರಾಂ ಇನ್ನುಳಿದ ಆಭರಣಗಳು ಒಟ್ಟು 67.09 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಇನ್ನು ಮನೆಗಳ್ಳತನ ತಡೆಗಟ್ಟಲು ಲಾಕ್ ಹೌಸ್ ಬೀಟ್ ಸಿಸ್ಟಮ್ ಜಾರಿಯಲ್ಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸುಮಾರು 220 ಜನರು ಈಗಾಗಲೇ ಇದರ ಸದುಪಯೋಗ ಪಡೆದಿದ್ದು, ಮನೆಗಳ್ಳತನವಾಗದಂತೆ ಬೆಳಗಾವಿ ಪೊಲೀಸರು ನಿಗಾವಹಿಸಿದ್ದಾರೆ. ಈ ಕಾರ್ಯಾಚರನೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಪ್ರಶಂಸೆ ಮತ್ತು ಬಹುಮಾನವನ್ನು ಘೋಷಿಸಿದರು.
ಇನ್ನು ಕಳೆದು ಹೋದ ಚಿನ್ನಾಭರಣ ಮರಳಿ ಪಡೆದ ವಾರಸಸುದಾರರು ಬೆಳಗಾವಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಹುಷಾರಿಲ್ಲದ ಕಾರಣ ಅತ್ತೆ ಮನೆಗೆ ಹೋಗಿದ್ದಾಗ ಮನೆಯ ಬಾಗಿಲು ಮುರಿದು 13 ಗ್ರಾಂ ಚಿನ್ನ, 125 ಗ್ರಾಂ ಬೆಳ್ಳಿ ಕಳುವಾದ ಬಗ್ಗೆ ದೂರು ನೀಡಲಾಗಿತ್ತು. ಈಗ ಪೊಲೀಸರು ಅದನ್ನ ಪತ್ತೆ ಹಚ್ಚಿದ್ದು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆಂದು ನಾಜೀಮಾ ಪಟೇಲ್ ಹೇಳಿದರು.
ಊರಿನ ಜಾತ್ರೆಗೆ ಹೋದ ದಿನದಂದೆ ರಾತ್ರಿ ಮನೆಗೆ ಕನ್ನ ಹಾಕಿ 32 ಗ್ರಾಂ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಈಗ ಪೊಲೀಸರು ಪತ್ತೆ ಹಚ್ಚಿ ನಮಗೆ ನೀಡಿದ್ದು ಸಂತಸ ತಂದಿದೆ ಎಂದು ರಾಜೇಶ್ವರಿ ಪಾಟೀಲ್ ಹೇಳಿದರು.
ಗಣೇಶ ಚತುರ್ಥಿಯಂದು ಊರಿಗೆ ಹೋದ ದಿನ ರಾತ್ರಿ ಮನೆಗಳ್ಳತನ ಮಾಡಲಾಗಿತ್ತು. 3ವರೆ ಗ್ರಾಂ ಚಿನ್ನ ಮತ್ತು 35 ಗ್ರಾಂ ಬೆಳ್ಳಿಯನ್ನು ಕದಿಯಲಾಗಿತ್ತು. ದೂರು ದಾಖಲಿಸಿದ ಹಿನ್ನೆಲೆ ಪೊಲೀಸರು ಈಗ ಮರಳಿ ನೀಡಿದ್ದು ತುಂಬಾ ಸಂತೋಷವಾಗಿದೆ ಎಂದು ನಿಶಾ ಅಪ್ಪಣ್ಣವರ ಹೇಳಿದರು.
