ಏಪ್ರಿಲ್ 24 ರಿಂದ 28 ರವರೆಗೆ ಬೆಳಗಾವಿಯ ಇತಿಹಾಸ ಪ್ರಸಿದ್ಧ ಕಮಲ ಬಸದಿಯಲ್ಲಿ ಶ್ರೀ ಧರ್ಮಚಕ್ರ ಆರಾಧನಾ ಮಹಾಮಹೋತ್ಸವ ನಡೆಯಲಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ತಿಳಿಸಿದರು.
ಬೆಳಗಾವಿ ನಗರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಪೂಜ್ಯ ಆಚಾರ್ಯ ಶ್ರೀ 108 ಧರ್ಮಸೇನ ಮುನಿಮಹಾರಾಜರ ದಿವ್ಯ ಸನ್ನಿಧಿಯಲ್ಲಿ ಬೆಳಗಾವಿ ಕೋಟೆಯ ಆವರಣದಲ್ಲಿರುವ ಪುರಾತನ ಶ್ರೀ 1008 ಭಗವಾನ್ ನೇಮಿನಾಥ ತೀರ್ಥಂಕರ ದಿಗಂಬರ ಜೈನ ಮಂದಿರದಲ್ಲಿ (ಕಮಲ ಬಸದಿ) ಏಪ್ರಿಲ್ 24 ರಿಂದ 28 ರವರೆಗೆ ‘ಶ್ರೀ ಧರ್ಮಚಕ್ರ ಆರಾಧನಾ ಮಹಾಮಹೋತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.

ಈ ಮಹೋತ್ಸವವು ಕೇವಲ ಒಂದು ಧಾರ್ಮಿಕ ವಿಧಿಯಲ್ಲ, ಇದು ಭಕ್ತರ ಆತ್ಮಕಲ್ಯಾಣಕ್ಕೆ ದಾರಿದೀಪವಾಗಲಿದೆ. ದಿಗಂಬರ ಜೈನ ಸಂಪ್ರದಾಯದಂತೆ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಪುಣ್ಯ ಕಾರ್ಯದಲ್ಲಿ ಜೈನ ಸಮಾಜದ ಬಾಂಧವರು ಹಾಗೂ ಸರ್ವ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುನಿಶ್ರೀಗಳ ಆಶೀರ್ವಾದ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ರೂವಾರಿ ಸುನೀಲ್ ಹನುಮಣ್ಣವರ ಮಾತನಾಡಿ, ಸುಮಾರು 12 ನೂರು ವರ್ಷ ಹಳೆಯ ಕಟ್ಟಡದಲ್ಲಿ ಈ ಸಮಾರಂಭವನ್ನು ಆಯೋಜಿಸಲು ಅನುಮತಿಯನ್ನು ಪಡೆಯಲಾಗಿದೆ. ಹೊಸ ಸರ್ಕಾರ 2 ಕೋಟಿ 75 ಲಕ್ಷ ಬಿಡುಗಡೆ ಮಾಡಿದ್ದು, ಮತ್ತೇ 1 ಕೋಟಿ 50 ಲಕ್ಷ ರೂಪಾಯಿಯಲ್ಲಿ ಶನಿವಾರ ಭಾನುವಾರ ರೇಜರ್ ಲೈಟಿಂಗ್ ಶೋ ಮಾಡಲಾಗುತ್ತಿದೆ. ಡಿಸೆಂಬರನಲ್ಲಿ ಚಳಿಗಾಲದ ಅಧಿವೇಶನದ ವೇಳೆ ಮುಖ್ಯಮಂತ್ರಿಗಳು, ಜಿಲ್ಲೆಯ ಸಚಿವರು, ಮತ್ತು ಸಮಾಜದ ಪ್ರಮುಖರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು.
