ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೋಳಿ ಗ್ರಾಮದಲ್ಲಿ ನಡೆದಿರುವ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹೊಸ ಕಾರು ಖರೀದಿಸಿ ಸಂಭ್ರಮದಲ್ಲಿದ್ದ ಯುವಕನೊಬ್ಬ, ವೈಯಕ್ತಿಕ ದ್ವೇಷದ ಕಾರಣಕ್ಕೆ ದಾರುಣವಾಗಿ ಕೊಲೆ ಮಾಡಿ , ನಂತರ ಸಜೀವ ದಹನ ಮಾಡಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೋಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಭೀಕರ ಘಟನೆ ನಡೆದಿದೆ. ಹೊಸ ಕಾರು ಖರೀದಿಸಿ ಪೂಜೆ ಮಾಡಿಸಿಕೊಂಡು ಮನೆಗೆ ಮರಳುತ್ತಿದ್ದ ಸೋಮಲಿಂಗಪ್ಪ ಪಡಸಲಗಿ (36) ಎಂಬುವವರನ್ನು, ದಾರಿ ಕಾಯುತ್ತಿದ್ದ ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತ ಸೋಮಲಿಂಗಪ್ಪನವರು, ಆರೋಪಿ ಸದಾಶಿವ ಪಡಸಲಗಿಯ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ವ್ಯಕ್ತವಾಗಿದ್ದು, ಇದೇ ಹಳೆ ವೈಷಮ್ಯವೇ ಈ ಅಮಾನವೀಯ ಕೃತ್ಯಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಕೊಲೆಗೈದ ಬಳಿಕ ಆರೋಪಿಗಳಾದ ಸದಾಶಿವ ಪಡಸಲಗಿ, ರವಿ ಪಾಟೀಲ ಮತ್ತು ನಾವಿ ಎಂಬುವವರು, ಮೃತದೇಹ ಮತ್ತು ಹೊಸ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
