• ನೇಗಿನಾಳದಲ್ಲಿ ಮಡಿವಾಳೇಶ್ವರ ಅನುಭವ ಮಂಟಪಕ್ಕೆ ಅಡಿಗಲ್ಲು
• ಶಾಸಕ ಬಾಬಾಸಾಹೇಬ ಪಾಟೀಲರಿಂದ ಭೂಮಿ ಪೂಜೆ
• ಭವನ ನಿರ್ಮಾಣಕ್ಕೆ 1.20 ಕೋಟಿ ಅನುದಾನ
• ಗರಗದ ಆತ್ಮರಾಮ ಶ್ರೀಗಳಿಂದ ಭಕ್ತರಿಗೆ ಆಶೀರ್ವಚನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಾಳ ಗ್ರಾಮದಲ್ಲಿ ಶ್ರೀ ಜಗದ್ಗುರು ಮಡಿವಾಳೇಶ್ವರ ಅನುಭವ ಮಂಟಪದ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗರಗದ ಪೂಜ್ಯಶ್ರೀ ಆತ್ಮರಾಮ ಮಹಾಸ್ವಾಮಿಗಳು ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ನೂತನ ಕಟ್ಟಡದ ಅಡಿಗಲ್ಲು ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ಬಸವಣ್ಣನವರ ಮೂರ್ತಿಗೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ನಂತರ ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಅವರು, “ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಸಹಕರಿಸಿದರೆ ಸುಸಜ್ಜಿತ ಮಂಗಳ ಕಾರ್ಯಾಲಯವನ್ನು ಶೀಘ್ರದಲ್ಲೇ ನಿರ್ಮಿಸಬಹುದು. ಈ ಭವನಕ್ಕಾಗಿ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಹಾಗೂ ನನ್ನ ವೈಯಕ್ತಿಕ ಅನುದಾನದಿಂದ 20 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ. ಗ್ರಾಮದ ದಾನಿಗಳು ಸಹ ಮುಂದೆ ಬಂದು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಧನಸಹಾಯ ಮಾಡಬೇಕು” ಎಂದು ಕರೆ ನೀಡಿದರು.
ಪೂಜ್ಯಶ್ರೀ ಆತ್ಮರಾಮ ಮಹಾಸ್ವಾಮಿಗಳು ತಮ್ಮ ಪ್ರವಚನದ ಮೂಲಕ ಭಕ್ತರಿಗೆ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ರೋಹಿಣಿ ಬಾಬಾಸಾಹೇಬ ಪಾಟೀಲ, ನಾನಾಸಾಹೇಬ ಪಾಟೀಲ, ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
