Belagavi

ಬಸವ ತತ್ವ ಕೇವಲ ಜಯಂತಿಗಷ್ಟೇ ಸೀಮಿತವಾಗದಿರಲಿ: ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕರೆ

Share

• ಬಸವಣ್ಣನವರನ್ನು ಫೋಟೋಗೆ ಸೀಮಿತಗೊಳಿಸಬೇಡಿ
• ಯುವ ಪೀಳಿಗೆಗೆ ಬಸವ ತತ್ವ ತಿಳಿಸಿ: ಸತೀಶ್ ಜಾರಕಿಹೊಳಿ
• ‘ಸಾಂಸ್ಕೃತಿಕ ನಾಯಕ’ ಘೋಷಣೆ ಐತಿಹಾಸಿಕ ನಿರ್ಧಾರ
• ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಾಗಲು ಕರೆ

ಬಸವಣ್ಣನವರನ್ನು ದೇವರೆಂದು ಪೂಜಿಸಿ ಫೋಟೋಗಳಿಗೆ ಸೀಮಿತಗೊಳಿಸಬೇಡಿ. ಅವರು ಸಮಾಜಕ್ಕಾಗಿ ಪಟ್ಟ ಶ್ರಮ, ಅನುಭವಿಸಿದ ಸಂಕಷ್ಟ ಮತ್ತು ಅವರು ಕಟ್ಟಿಕೊಟ್ಟ ಸಮಾನತೆಯ ಹಾದಿಯನ್ನು ಯುವ ಪೀಳಿಗೆಗೆ ತಿಳಿಸಿಕೊಡಿ. ಆಗ ಮಾತ್ರ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಬಣ್ಣಿಸಿದರು.
ಬೆಳಗಾವಿಯ ಗೋವಾ ವೇಸ್ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವಣ್ಣನವರ ಭವ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವಾಗಿದೆ. ಬಸವಣ್ಣನವರ ವಚನ ಸಾಹಿತ್ಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಜಗತ್ತಿಗೆ ಸಾರಲು ಈ ಘೋಷಣೆ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದರು. ಬಸವಣ್ಣನವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಇಡೀ ರಾಜ್ಯದ ಅಸ್ಮಿತೆಯಾಗಿ ಗುರುತಿಸಿದ ಈ ನಿರ್ಧಾರವು ನಾಡಿನಾದ್ಯಂತ ದೊಡ್ಡ ಮಟ್ಟದ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ದರಿಂದ ಬಸವಣ್ಣನವರನ್ನು ಕೇವಲ ಜಯಂತಿಯ ದಿನವಷ್ಟೇ ನೆನೆಯಬಾರದು, ಅವರನ್ನು ನಿತ್ಯ ನೆನೆಯುವ ಕಾರ್ಯವಾಗಲಿ ಎಂದು ಸಚಿವರು ಸಲಹೆ ನೀಡಿದರು.

ಮಾನವ ಬಂಧುತ್ವ ವೇದಿಕೆಯ ಮೂಲಕ ನಾವು ಕಳೆದ 20 ವರ್ಷಗಳಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಆಶಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಕಷ್ಟ ಬಂದಾಗ ಮಾತ್ರ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅನ್ನು ನೆನೆಯುವುದು ಬೇಡ. ಕಷ್ಟವಿದ್ದಾಗ ಮಾತ್ರವಲ್ಲ, ಸುಖವಿದ್ದಾಗಲೂ ಈ ತತ್ತ್ವಗಳ ಹಾದಿಯಲ್ಲಿ ನಡೆದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ ಎಂದು ಸಚಿವರು ಪ್ರತಿಪಾಧಿಸಿದರು. ಇದೇ ವೇಳೆ ದಲಿತ ಹಾಡುಗಾರರೊಬ್ಬರು ಅಣ್ಣ ಬಸವಣ್ಣನವರ ಕುರಿತಾಗಿ ಬರೆದ ಹಾಡನ್ನು ಅವರು ನೆರೆದ ಸಭೀಕರಿಗೆ ಕೇಳಿಸಿದರು. (ಫ್ಲೋ)
ಇದಕ್ಕೂ ಮೊದಲೂ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಶನ್‌, ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌, ಬಸವ ಜಯಂತಿ ಉತ್ಸವ ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ, ರತ್ನಪ್ರಭಾ ಬೆಲ್ಲದ ಸುನಂದಾ ಎಮ್ಮಿ, ಡಾ. ರಾಜಶೇಖರ ಪಾಟೀಲ್, ಬೆಳಗಾವಿ ಮಹಾನಗರ ಪಾಲಿಕೆಯ ಉಪಮೇಯರ್ ಹನುಮಂತ ಕೊಂಗಾಲಿ, ಡಾ. ಗೀತಾ ದೇಯನ್ನವರ, ಮುರುಘೇಂದ್ರಗೌಡ ಪಾಟೀಲ್, ಮಾಜಿ ಶಾಸಕ ಅನೀಲ ಬೆನಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಅನೇಕ ಗಣ್ಯರು ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Tags:

error: Content is protected !!