ರಾಮದುರ್ಗ ನಗರದಲ್ಲಿ ಇಂದು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಗೋಕಾಕದ ಜನಪ್ರಿಯ ಶಾಸಕ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಮದುರ್ಗ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು.



ರಾಮದುರ್ಗ ನಗರದ ಶ್ರೀ ವಿಶ್ವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವನ್ನು ಶಾಸಕ ರಮೇಶ್ ಜಾರಕಿಹೊಳಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ವಿವಿಧ ಮೋರ್ಚಾಗಳ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದ ಅವರು, ಪಕ್ಷದ ಬಲವರ್ಧನೆಯಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದರು. “ಬಿಜೆಪಿ ಸಿದ್ಧಾಂತಗಳನ್ನು ಮನೆಮನೆಗೆ ತಲುಪಿಸಲು ಮತ್ತು ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೂತನ ಪದಾಧಿಕಾರಿಗಳು ಕಂಕಣಬದ್ಧರಾಗಿ ಶ್ರಮಿಸಬೇಕು” ಎಂದು ಅವರು ಕಾರ್ಯಕರ್ತರಿಗೆ ಹುರಿದುಂಬಿಸಿದರು.


ಕಾರ್ಯಕ್ರಮದಲ್ಲಿ ರಾಮದುರ್ಗ ಮಂಡಲ ಅಧ್ಯಕ್ಷರಾದ ಡಾ. ಕೆ.ವಿ. ಪಾಟೀಲ, ಹಿರಿಯ ಮುಖಂಡರಾದ ಪಿ.ಎಫ್. ಪಾಟೀಲ, ಸಿ.ಬಿ. ಪಾಟೀಲ ಹಾಗೂ ಮಾರುತಿ ಕೊಪ್ಪದ ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಕಲ್ಲಣ್ಣ ವಜ್ರಮಟ್ಟಿ, ದ್ಯಾವಪ್ಪ ಬೆಳವಡಿ, ಶ್ರೀಮತಿ ಮಹಾದೇವಿ ರೊಟ್ಟಿ, ಈರನಗೌಡ ಹೊಸಗೌಡರ ಸೇರಿದಂತೆ ಪ್ರಮುಖರು ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಗಂಗಾಧರ ಬೋಸ್ಥೆ, ತೌಕಿರ ಕತಿಬ, ಸಿದ್ದು ಗುಡಿಯನ್ನವರ ಹಾಗೂ ತಾಲ್ಲೂಕು ಮಟ್ಟದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಈ ಕೇಸರಿ ಪಡೆಯ ಸಮಾವೇಶಕ್ಕೆ ಸಾಕ್ಷಿಯಾದರು.

