ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಈದ್ ಉಲ್ ಫೀತರ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. 30 ದಿನಗಳ ಕಠಿಣ ಉಪವಾಸ ವ್ರತ ಮುಗಿಸಿದ ಮುಸ್ಲಿಂ ಬಾಂಧವರು, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಎಂ.ಕೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇಂದು ಸಹಸ್ರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಒಗ್ಗೂಡಿ ಈದ್ ನಮಾಜ್ ಸಲ್ಲಿಸಿದರು. ಒಂದು ತಿಂಗಳ ಕಾಲ ರೋಜಾ ಉಪವಾಸ ಆಚರಿಸಿ, ಆಧ್ಯಾತ್ಮಿಕ ಪಠಣದೊಂದಿಗೆ ಪವಿತ್ರ ರಂಜಾನ್ ಮಾಸವನ್ನು ಕಳೆದಿದ್ದ ಸಮುದಾಯದ ಜನರು, ಇಂದು ವಿಶೇಷ ನಮಾಜ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳು ಧರ್ಮ ಸಂದೇಶ ನೀಡಿ, ಮಾನವೀಯತೆ ಮತ್ತು ಸಹೋದರತ್ವದ ಮಹತ್ವವನ್ನು ಸಾರಿದರು.
ನಮಾಜ್ ಬಳಿಕ ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲಿ ಹಾಗೂ ಸಕಲ ಜೀವರಾಶಿಗಳಿಗೂ ಒಳಿತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಿರಿಯರು-ಕಿರಿಯರು ಎನ್ನದೆ ಎಲ್ಲರೂ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಈದ್ ಶುಭಾಶಯಗಳನ್ನು ಹಂಚಿಕೊಂಡರು.
ಪ್ರಾರ್ಥನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
