ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲೆ ಬಿಜೆಪಿ ನೇರ ದಾಳಿ: ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ
ದೆಹಲಿಯ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (UNI) ಕಚೇರಿಯ ಮೇಲಿನ ಪೊಲೀಸ್ ಕಾರ್ಯಾಚರಣೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ದೇಶದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಧ್ವನಿ ಅಡಗಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಅತ್ಯಂತ ಹಳೆಯ ಸುದ್ದಿ ಸಂಸ್ಥೆಯಾದ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾದ ದೆಹಲಿ ಕಚೇರಿಯ ಮೇಲೆ ಪೊಲೀಸ್ ಬಂದೋಬಸ್ತಿನಲ್ಲಿ ದಾಳಿ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ರಾತ್ರೋರಾತ್ರಿ ಪತ್ರಕರ್ತರನ್ನು ಹೊರಹಾಕಿ ಕಾರ್ಯಾಲಯವನ್ನು ವಶಕ್ಕೆ ಪಡೆದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದಮನಕಾರಿ ನೀತಿಯಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡುವವರನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಲಾಗುತ್ತಿದೆ. ಸತ್ಯ ಹೇಳುವ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ಮೇಲೆ ಕಣ್ಗಾವಲಿಟ್ಟು, ಅವುಗಳನ್ನು ಮುಚ್ಚಿಸಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಹೇಗೆ ತಾನೇ ಉಳಿಯಲು ಸಾಧ್ಯ ಎಂದು ಸುರ್ಜೇವಾಲಾ ಪ್ರಶ್ನಿಸಿದರು. ಇದು ದೇಶದ ನಾಲ್ಕನೇ ಸ್ತಂಭದ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ನೇರ ದಾಳಿಯಾಗಿದ್ದು, ಕೇವಲ ಹೆದರಿಸುವ ತಂತ್ರದ ಭಾಗವಾಗಿದೆ ಎಂದು ಅವರು ಕಿಡಿಕಾರಿದರು.
