Belagavi

ಟೆಂಡರ್ ನೆಪದಲ್ಲಿ ರಾಯಣ್ಣನ ವೀರಭೂಮಿಗೆ ಬೀಗ…ಪ್ರವಾಸಿಗರ ಅಸಮಾಧಾನ… ಬೀಗ ತೆಗೆಯದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಮಾಜಸೇವಕರು

Share

• ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳಕ್ಕೆ ಬೀಗ
• ಕೋಟಿ ಕೋಟಿ ವೆಚ್ಚದ ವೀರಭೂಮಿ ಬಂದ್
• ಟೆಂಡರ್ ನೆಪದಲ್ಲಿ ಪ್ರವಾಸಿಗರಿಗೆ ತೀವ್ರ ವಂಚನೆ
• ಬೀಗ ತೆಗೆಯದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

ನಂದಗಢದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳವಾದ ವೀರಭೂಮಿಗೆ ಸರ್ಕಾರ ಬೀಗ ಜಡಿದಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಈ ಪುಣ್ಯಭೂಮಿಯನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಿದ್ದರೂ, ಒಳಗೆ ಬಿಡದೆ ಸತಾಯಿಸಲಾಗುತ್ತಿದೆ. 20 ಕೋಟಿ ರೂಪಾಯಿ ಟೆಂಡರ್ ಪ್ರಕ್ರಿಯೆಯ ಲಾಬಿಗಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆಯೇ ಎಂಬ ಅನುಮಾನ ಮೂಡಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ನಂದಗಢದಲ್ಲಿರುವ ಸಮಾಧಿ ಸ್ಥಳ ‘ವೀರಭೂಮಿ’ಯನ್ನು ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಭವ್ಯವಾಗಿ ಅಭಿವೃದ್ಧಿಪಡಿಸಿದೆ. ದೇಶಭಿಮಾನದ ಈ ಐತಿಹಾಸಿಕ ತಾಣವನ್ನು ವೀಕ್ಷಿಸಲು ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಮತ್ತು ಶಾಲಾ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ, ಇಷ್ಟೊಂದು ಪ್ರಮುಖ ಪ್ರವಾಸಿ ತಾಣಕ್ಕೆ ಪ್ರಸ್ತುತ ಬೀಗ ಹಾಕಲಾಗಿದ್ದು, ದೂರದ ಊರುಗಳಿಂದ ಬರುವ ಸಾರ್ವಜನಿಕರು ವೀರಭೂಮಿಯ ದ್ವಾರದ ಮುಂಭಾಗದಲ್ಲೇ ನಿಂತು ನಿರಾಸೆಯಿಂದ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಆಘಾತಕಾರಿ ಮಾಹಿತಿಯ ಪ್ರಕಾರ, ವೀರಭೂಮಿಯ ನಿರ್ವಹಣೆಗೆ ಸಂಬಂಧಿಸಿದಂತೆ ಸದ್ಯ 20 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ಆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹಸ್ತಾಂತರವಾದರೆ ಮಾತ್ರ ಬೀಗ ತೆಗೆಯುವುದಾಗಿ ಹೇಳಲಾಗುತ್ತಿದೆ. ಸರ್ಕಾರದ ಈ ನಿರಾಸಕ್ತಿ ಮತ್ತು ಕಣ್ಮುಚ್ಚಿ ಕುಳಿತಿರುವ ಧೋರಣೆಯ ವಿರುದ್ಧ ಸಮಾಜಸೇವಕ ನಿಲೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ವೀರಭೂಮಿಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಹಾಗೂ ಮುಂದಿನ ಪೀಳಿಗೆಗೆ ರಾಯಣ್ಣನ ಇತಿಹಾಸವನ್ನು ತಿಳಿಸುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Tags:

error: Content is protected !!