ಸಾವಿನ ಮನೆಯಲ್ಲೂ ಮಾನವೀಯತೆಯ ಹಣತೆ ಬೆಳಗಿದ ಘಟನೆಯೊಂದು ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ನಡೆದಿದೆ. ತನ್ನ ಆಸೆಯ ಕ್ರಿಕೆಟ್ ಬ್ಯಾಟ್ ಖರೀದಿಸಲು ಕೂಡಿಟ್ಟಿದ್ದ ಹಣವನ್ನು ಸ್ಮಶಾನದ ಕಾರ್ಯಕ್ಕೆ ನೀಡಿ ಪುಟ್ಟ ಬಾಲಕಿ ನಿಧಿ ಪಾಟಿಲ್ ಎಲ್ಲರ ಕಣ್ಣಾಲಿಗಳು ತೇವವಾಗುವಂತೆ ಮಾಡಿದ್ದಾಳೆ.
ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅತ್ಯಗತ್ಯವಾಗಿ ಬೇಕಾಗುವ ಬೆರಣಿಗಳನ್ನು ದಾನ ಮಾಡುವ ಮೂಲಕ ಸಮಾಜ ಸೇವಕರು ಗಮನ ಸೆಳೆದಿದ್ದಾರೆ. ಸಮಾಜ ಸೇವಕರಾದ ಗಂಗಾಧರ್ ಪಾಟಿಲ್ ಮತ್ತು ಆಲನ್ ವಿಜಯ್ ಮೋರೆ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಬಾಲಕಿ ನಿಧಿ ಪಾಟಿಲ್ ತೋರಿದ ತ್ಯಾಗ ಈಗ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ. ಉದಯೋನ್ಮುಖ ಕ್ರಿಕೆಟರ್ ಆಗಿರುವ ನಿಧಿ, ತಾನು ಹೊಸ ಬ್ಯಾಟ್ ಖರೀದಿಸಲು ಅತೀ ಆಸೆಯಿಂದ ಕೂಡಿಟ್ಟಿದ್ದ ಹಣವನ್ನು ಅಂತಿಮ ಸಂಸ್ಕಾರದ ಗೌರವಯುತ ವಿಧಿವಿಧಾನಗಳಿಗಾಗಿ ಬಳಸಲು ಮುಂದಾಗುವ ಮೂಲಕ “ನಮಗಿಂತ ಪರರು ಮುಖ್ಯ” ಎಂಬ ಸಂದೇಶ ಸಾರಿದ್ದಾಳೆ.
ಸ್ಮಶಾನದ ಕಾರ್ಮಿಕರಾದ ಮಲ್ಲೇಶ್ ಕಾಂಬಳೆ ಮತ್ತು ತಂಡ ಈ ದಾನವನ್ನು ಅತ್ಯಂತ ಭಾವುಕರಾಗಿ ಸ್ವೀಕರಿಸಿದರು. ತಂದೆಯ ಒಂದು ಕರೆಯಲ್ಲಿ ಸ್ಮಶಾನದ ಅಗತ್ಯವನ್ನು ಅರಿತ ನಿಧಿ, ಕ್ಷಣವೂ ಯೋಚಿಸದೆ ತನ್ನ ವೈಯಕ್ತಿಕ ಆಸೆಯನ್ನು ಬದಿಗೊತ್ತಿದ್ದು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಶೋಕದ ಮೌನ ಆವರಿಸಿರುವ ಸ್ಮಶಾನದಲ್ಲಿ ಈ ಪುಟ್ಟ ಬಾಲಕಿಯ ದೊಡ್ಡ ಮನಸ್ಸು ಮಾನವೀಯತೆಯ ಪ್ರಕಾಶವನ್ನು ಹರಿಸಿದೆ. ಈ ಕಾರ್ಯದ ಹಿಂದೆ ಗಂಗಾಧರ್ ಪಾಟೀಲ್ ಮತ್ತು ತಂಡದ ನಿರಂತರ ಸೇವೆಯ ಮನೋಭಾವ ಅಡಗಿದೆ. ನಿಧಿಯ ಈ ಕಾರ್ಯಕ್ಕೆ ಮಾಜಿ ಮಹಾಪೌರ ವಿಜಯ್ ಮೋರೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಬೈಟ್
