Protest

ತಲ್ಲೂರು ಗ್ರಾಮದಲ್ಲಿ ಮಹಿಳೆಯರ ರೌದ್ರಾವತಾರ: ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಬೀದಿಗಿಳಿದ ನೂರಾರು ತಾಯಂದಿರು

Share

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದಲ್ಲಿಂದು ಮದ್ಯದಂಗಡಿ ವಿರುದ್ಧ ಮಹಿಳೆಯರು ಸಮರ ಸಾರಿದ್ದಾರೆ. ಗ್ರಾಮದಲ್ಲಿರುವ ವೈನ್ ಶಾಪ್‌ನಿಂದಾಗಿ ಜನರ ಬದುಕು ಹದಗೆಡುತ್ತಿದ್ದು, ಕೂಡಲೇ ಅದನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಹಾಗೂ ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ‘ವೀರೇಶ ವೈನ್ ಶಾಪ್’ ಮುಂದೆ ಇಂದು ತೀವ್ರ ಪ್ರತಿಭಟನೆ ನಡೆಸಿದ ಮಹಿಳೆಯರು, ಮದ್ಯದಂಗಡಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಆಗ್ರಹಿಸಿದರು. ಮದ್ಯದಂಗಡಿಯ ಸುತ್ತಮುತ್ತ ಶಾಲಾ ಮಕ್ಕಳು ಮತ್ತು ಮಹಿಳೆಯರು ಸಂಚರಿಸದಂತಹ ಕೆಟ್ಟ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇಡೀ ದಿನ ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಪುರುಷರು ಕುಡಿತಕ್ಕೆ ಸುರಿಯುತ್ತಿದ್ದು, ಗ್ರಾಮದ ಯುವಕರು ಮತ್ತು ವೃದ್ಧರು ವ್ಯಸನಕ್ಕೆ ಬಲಿಯಾಗಿ ಸಾವನ್ನಪ್ಪುತ್ತಿದ್ದಾರೆ. ಇದರಿಂದಾಗಿ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಬೀದಿಪಾಲಾಗುತ್ತಿವೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ಮದ್ಯದ ಚಟದಿಂದಾಗಿ ಹಲವು ಸಂಸಾರಗಳು ಛಿದ್ರವಾಗುತ್ತಿವೆ. ಮದುವೆಯಾದ ಹೊಸತಲ್ಲೇ ಗಂಡನ ಕುಡಿತದ ಹಿನ್ನೆಲೆಯಲ್ಲಿ ಸೊಸೆಯಂದಿರು ತವರು ಮನೆ ಸೇರುತ್ತಿರುವ ಘಟನೆಗಳು ಗ್ರಾಮದಲ್ಲಿ ಹೆಚ್ಚಿವೆ ಎಂದು ಕಣ್ಣೀರು ಹಾಕಿದರು. ಜನಜೀವನವನ್ನು ಹೈರಾಣಾಗಿಸಿರುವ ಈ ಮದ್ಯದಂಗಡಿಯನ್ನು ಶಾಶ್ವತವಾಗಿ ಬಂದ್ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಒಂದು ವೇಳೆ ಮದ್ಯದಂಗಡಿ ಬಂದ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!