ಹಾವೇರಿಯಲ್ಲಿ ಶನಿವಾರ ನಡೆಯಲಿರುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವು ಶಕ್ತಿ ಪ್ರದರ್ಶನಕ್ಕಾಗಿ ಅಲ್ಲ, ಸರ್ಕಾರವು ಸಾವಿರ ದಿನಗಳಲ್ಲಿ ಕೈಗೊಂಡಿರುವ ಕಾರ್ಯಗಳ ಲೆಕ್ಕ ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಸಮಾವೇಶದಲ್ಲಿ 1.06 ಲಕ್ಷ ಜನರಿಗೆ ಕಂದಾಯ ಭೂಮಿಯ ಮಾಲೀಕತ್ವದ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಹಿಂದಿನ ಆರು ವರ್ಷಗಳಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದ್ದರೆ, ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಒಟ್ಟಾರೆ 2.20 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ವಿವರಿಸಿದರು.
ಇನ್ನೂ 1.39 ಲಕ್ಷ ಅರ್ಜಿದಾರರಿಗೆ ಹಕ್ಕುಪತ್ರ ನೀಡುವುದು ಬಾಕಿಯಿದೆ. ಕೇಂದ್ರ ಸರ್ಕಾರ ಜನಗಣತಿ ಪ್ರಕ್ರಿಯೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 2025 ನಂತರ ಹೊಸ ಕಂದಾಯ ಗ್ರಾಮಗಳ ಘೋಷಣೆ ಮಾಡಬಾರದು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.
ಆದಾಗ್ಯೂ, ಬಾಕಿ ಇರುವ ಗ್ರಾಮಗಳ ಕುರಿತು ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರದ ಅನುಮತಿ ದೊರಕಿದ ಬಳಿಕ ಉಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸಿ ಹಕ್ಕುಪತ್ರ ವಿತರಣೆ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದರು.
