ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತಮ್ಮ ಅಮಾನತ್ತಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಎಸ್’ಡಿಎಂಸಿ ಕಾಯ್ದೆಯ ಚೌಕಟ್ಟಿನಲ್ಲೇ ತಾವು ಕೆಲಸ ಮಾಡಿದ್ದರೂ, ಬಿಇಒ ಅವರು ವಿನಾಕಾರಣ ಅಮಾನತ್ತು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಹುಕ್ಕೇರಿ ಬಿಇಓ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮನ್ನು ಅಮಾನತ್ತು ಮಾಡಿದ್ದಾರೆ ಎಂಬುದು ಸುರೇಖಾ ಬಾಯಣ್ಣವರ ಮುಖ್ಯ ಶಿಕ್ಷಕಿಯ ಪ್ರಮುಖ ದೂರು. ಎಸ್’ಡಿಎಂಸಿ ಸಮಿತಿಯ ಕೆಲವು ನಿಯಮ ಬಾಹಿರ ಕೆಲಸಗಳನ್ನು ನಾನು ಮುಂದೂಡಿದ್ದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಬಿಇಓ ಅಮಾನತ್ತಿನ ಶಿಕ್ಷೆ ನೀಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಅವರು ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
