Belagavi

ಗ್ರಾಹಕರ ಹಕ್ಕುಗಳನ್ನು ಸಂರಕ್ಷಣೆಗೆ ಸಂಚಾರಿ ಪೀಠ ಅಗತ್ಯ

Share

ಅಧಿಕ ಬೆಲೆ ನಿಗದಿ, ಸೇವೆಗಳಲ್ಲಿನ ಕೊರತೆ, ಉತ್ಪನ್ನಗಳ ಗುಣಮಟ್ಟ, ದಾರಿತಪ್ಪಿಸುವ ಜಾಹೀರಾತುಗಳು ಅಥವಾ ಮಾರಾಟಗಾರ ವ್ಯಾಪಾರಿಯ ಅನ್ಯಾಯದ ಕುರಿತು ಗ್ರಾಹಕರ ದೂರುಗಳನ್ನು ಪರಿಹರಿಸಲು ಜಿಲ್ಲೆಯಲ್ಲಿ “ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ” ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ. ಎಚ್ ಮುನಿಯಪ್ಪ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬೆಂಗಳೂರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಟೋ ನಗರದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ ಕಟ್ಟಡದ 3ನೇ ಮಹಡಿಯ ಕೆ.ಎಚ್.ಪಾಟೀಲ ಸಭಾ ಭವನದಲ್ಲಿ ಬುಧವಾರ ನಡೆದ ನೂತನ “ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠದ ಉದ್ಘಾಟನಾ ಸಮಾರಂಭ”ದಲ್ಲಿ ಅವರು ಮಾತನಾಡಿದರು.

ಪ್ರತಿ ಬಾರಿಯೂ ನ್ಯಾಯಕ್ಕಾಗಿ ಗ್ರಾಹಕರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಜಿಲ್ಲೆಯಲ್ಲಿ ಗ್ರಾಹಕರ ಪ್ರಕರಣ ಬಾಕಿ ಇವೆ ಇವುಗಳ ತುರ್ತು ವಿಲೇವಾರಿಗಾಗಿ ಪ್ರತ್ಯೇಕ ಸಂಚಾರಿ ಪೀಠ ಅಗತ್ಯವಿತ್ತು. ಅದರಂತೆ ಕಡಿಮೆ ವೆಚ್ಚದಲ್ಲಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಗ್ರಾಹಕ ಆಯೋಗಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಕಾರ್ಯನಿರ್ವಹಿಸಲಿದೆ ಎಂದರು.

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ವ್ಯಾಪಾರದ ಪ್ರಕ್ರಿಯೆಯಲ್ಲಿ ಸಂಘರ್ಷದ ಪಕ್ಷಗಳ ನಡುವಿನ ಪರ್ಯಾಯ ವಿವಾದ ಪರಿಹಾರದ ವ್ಯವಸ್ಥೆಯಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ. ಎಚ್ ಮುನಿಯಪ್ಪ ತಿಳಿಸಿದರು.

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ : ಎಚ್. ಕೆ ಪಾಟೀಲ ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಅಗತ್ಯವಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠ ಪ್ರಾರಂಭವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರಂತರ ಪ್ರಯತ್ನದಿಂದ ಇಂದು ಖಾಯಂ ಸಂಚಾರಿ ಪೀಠ ಉದ್ಘಾಟನೆಯಾಗುತ್ತಿದೆ. ಗ್ರಾಹಕರ ಆಯೋಗ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಹಕರ ಪ್ರಕರಣಗಳು ಬಹಳ ದಿನಗಳನ್ನು ತೆಗೆದುಕೊಳ್ಳದೆ ಶೀಘ್ರ ವಿಲೇವಾರಿಯಾಗುವ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಮೇಲ್ಪಟ್ಟು ಗ್ರಾಹಕರ ಪ್ರಕರಣಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಪ್ರಕರಣ ಬಾಕಿ ಉಳಿಯದಂತೆ ಗ್ರಾಹಕರು ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಗ್ರಾಹಕರ ಸಮಸ್ಯೆ ಬಹು ಬೇಗನೆ ಇತ್ಯರ್ಥಗೊಳಿಸಲು ಕೆಲವು ತಿದ್ದುಪಡಿಯಾಗಬೇಕು. ಗ್ರಾಹಕರಿಗೆ ತಮ್ಮ ಹಕ್ಕು ಸಮೇತ ಸೇವೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೀಠ ನೆರವಾಗಬೇಕು. ಗ್ರಾಹಕರ ಸಂರಕ್ಷಣೆ ಕ್ರಮವಾಗಿ ಯಾವುದೇ ಪ್ರಕರಣಗಳು ಬಾಕಿ ಉಳಿಯಬಾರದು. ಜನಪರ, ಜನೋಪಯೋಗಿ ಸಂಚಾರಿ ಪೀಠವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಎಚ್. ಕೆ ಪಾಟೀಲ ತಿಳಿಸಿದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ , ಲೋಕಾಸಭಾ ಸಂಸದ ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ ಕುಲಕರ್ಣಿ, ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಹೆಚ್ಚುವರಿ ಪೀಠ) ಅಧ್ಯಕ್ಷ ಮಹಾಂತೇಶ ಶಿಗ್ಗಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಸುನೀತಾ ಬಾಗೇವಾಡಿ, ಬೆಂಗಳೂರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಕಮತಗಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಪ್ಪ ಕಿವುಡಸಣ್ಣವರ ಸೇರಿದಂತೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!