ಬೆಳಗಾವಿ – ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ ಬೆಳಗಾವಿ ಜಿಲ್ಲೆಯ ಮುಖ್ಯ ಜಲದ ಮೂಲವಾಗಿದ್ದು ಬೆಳಗಾವಿ ಮಹಾನಗರದ ಜೀವನಾಡಿ ಆಗಿದ್ದು ಈ ಜಲಾಶಯದಿಂದ ಹುಬ್ಬಳ್ಳಿ ಧಾರವಾಡಕ್ಕೆ ಬೃಹತ್ ಪ್ರಮಾಣದ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭವಾಗಿದ್ದು ಇದಕ್ಕೆ ವಿರೋಧ ಮಾಡದೇ ಮೌನ ವಹಿಸಿರುವ ಬೆಳಗಾವಿ ಜಿಲ್ಲೆಯ ಶಾಸಕರ ವಿರುದ್ಧ ಯುವ ನಾಯಕ ರಾಜೀವ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ವರ್ಷಕ್ಕೆ ಐದು ಟಿಎಂಸಿ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಶಾಸಕರು ತಕ್ಷಣ ಪಕ್ಷಾತೀತವಾಗಿ ಸಭೆ ಸೇರಿ ಕಾಮಗಾರಿಯನ್ನು ತಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ.
ಬೆಳಗಾವಿಯ ಮಲಪ್ರಭಾ ನದಿಯ ನವೀಲತೀರ್ಥ ಜಲಾಶಯದಿಂದ ಹುಬ್ಬಳ್ಳಿ- ಧಾರವಾಡ ಮಹಾನಗರಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ಹಿಡಕಲ್ ಜಲಾಶಯದಿಂದಲೂ ನೀರು ಸರಬರಾಜು ಮಾಡಿದ್ರೆ ಬೆಳಗಾವಿ ಮಹಾನಗರದ ಜನತೆ ಮತ್ತು ಬೆಳಗಾವಿ ಜಿಲ್ಲೆಯ ರೈತರು ನೀರಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ರಾಜೀವ ಟೋಪಣ್ಣವರ ಈ ವಿಚಾರವನ್ನು ಬೆಳಗಾವಿ ಜಿಲ್ಲೆಯ ಶಾಸಕರು ಗಂಭೀರವಾಗಿ ಪರಗಣಿಸಬೇಕು ಎಂದು ಟೋಪಣ್ಣವರ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ವಿಮಾನ,ಬೆಳಗಾವಿಯ ರೈಲು,ಬೆಳಗಾವಿಯ ಕಚೇರಿಗಳನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಿದ ಬೆನ್ನಲ್ಲಿಯೇ ಈಗ ಬೆಳಗಾವಿ ಜಿಲ್ಲೆಯ ಜಲದ ಮೂಲಕ್ಕೂ ಕಣ್ಣು ಹಾಕಿರುವ ಹುಬ್ಬಳ್ಳಿ – ಧಾರವಾಡದ ಜನಪ್ರತಿನಿಧಿಗಳಿಗೆ ಲಗಾಮು ಹಾಕುವ ಕಾರ್ಯವನ್ನು ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕಾಗಿದ್ದು ಈ ವಿಚಾರದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮುಂದಾಳತ್ವ ವಹಿಸಬೇಕೆಂದು ರಾಜೀವ ಟೋಪಣ್ಣವರ ಆಗ್ರಹಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಗೆ ಪದೇ ಪದೇ ಅನ್ಯಾಯ ಆಗುತ್ತಲೇ ಇದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ದೆಹಲಿಯ ಪೋಟೋಸೇಷನ್ ಬಿಟ್ಟು ಬೆಳಗಾವಿ ಜಿಲ್ಲೆಯ ಹಿತ ಕಾಪಾಡಬೇಕು , ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಹಿಡಕಲ್ ಜಲಾಶಯದ ನೀರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಟೋಪಣ್ಣವರ ಮನವಿ ಮಾಡಿದ್ದಾರೆ.