Belagavi

ಸೇವಾದಳದ ಕಲ್ಪನೆ ಮೂಡಿದ್ದು 1924ರ ಬೆಳಗಾವಿ ಎಐಸಿಸಿ ಅಧಿವೇಶನದಲ್ಲಿ – ಸಚಿವ ಎಚ್.ಕೆ. ಪಾಟೀಲ

Share

1942 ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸೇವಾದಳ ಸಂಕಲ್ಪನೆ ಬಂದಿದ್ದು ಬೆಳಗಾವಿಯಲ್ಲಿ 1924 ರಲ್ಲಿ ಗಾಂಧಿಜೀ ಅಧ್ಯಕ್ಷತೆಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಬೆಳಗಾವಿಯಲ್ಲಿ ಭಾನುವಾರ ರಂಗಸೃಷ್ಟಿ ಮತ್ತು ಭಾಗವತರು ಸಂಘಟನೆ ಆಯೋಜಿಸಿದ್ದ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಂತಹ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದರು? ಅವರು ಎಂತಹ ಸಂದೇಶ ನೀಡಿದರು ಎನ್ನುವುದನ್ನು ಅರಿತವರು ಈ ಕಾರ್ಯಕ್ರಮ ಒಪ್ಪಿ, ಅಪ್ಪಿಕೊಳ್ಳುತ್ತಾರೆ. ರಾಷ್ಟ್ರವನ್ನು ಹೇಗೆ ಕಟ್ಟಬೇಕು, ರಾಷ್ಟ್ರದಲ್ಲಿ ನಾವು ಹೇಗಿರಬೇಕು ಎನ್ನುವ ಜೊತೆಗೆ, ಜನರಲ್ಲಿ ಸಚ್ಚಾರಿತ್ರ್ಯ ಮೂಡಿಸಬೇಕು ಎನ್ನುವ ಸಂದೇಶ ಹೊರಗೆ ಬರುವಂತೆ ಅಧಿವೇಶನ ನಡೆಯಿತು.

ಅಸ್ಪೃಶ್ಯತೆ ತೊಡೆಯುವುದನ್ನೇ ಮೂಲಮಂತ್ರವಾಗಿಸಿಕೊಂಡು ಅಧಿವೇಶನ ನಡೆಸಲಾಯಿತು. ಬ್ರಾತೃತ್ವ ಭಾವನೆಯನ್ನು ಮೂಡಿಸಿ ಎಲ್ಲರನ್ನೂ ಸ್ವಾತಂತ್ರ್ಯ ಚಳವಳಿಯಲ್ಲಿ ಜೋಡಿಸಿಕೊಂಡು ರಾಷ್ಟ್ರೀಯ ಚಳವಳಿಯಲ್ಲಿ ಒಗ್ಗೂಡಿಸಿದ ಅಧಿವೇಶನ ಇದಾಗಿತ್ತು ಎಂದು ಎಚ್.ಕೆ.ಪಾಟೀಲ ಹೇಳಿದರು.ಚರಕ ಸ್ವಾವಲಂಬಿಯ ಸಂಕೇತ. ಅದರ ಮೂಲಕ ಚಳವಳಿ ಆರಂಭಿಸಿದ್ದು ಬೆಳಗಾವಿ ಅಧಿವೇಶನ. ಸೇವಾದಳದ ಕಲ್ಪನೆ ಮೂಡಿಸಿ ಅದರ ಆರಂಭಕ್ಕೆ ಕಾರಣವಾಗಿದ್ದು ಈ ಅಧಿವೇಶನ. ಕರ್ನಾಟಕದ ಕಲ್ಪನೆ ಸಮರ್ಪಕವಾಗಿ ಬಂದಿದ್ದೇ ಬೆಳಗಾವಿ ಅಧಿವೇಶನದ ಮೂಲಕ. ಕರ್ನಾಟಕದ ಕಲ್ಪನೆ ಬೀಜಾಂಕುರವಾಗಿದ್ದೇ ಬೆಳಗಾವಿ ಅಧಿವೇಶನದಲ್ಲಿ. ಇಲ್ಲಿ ಹಾಡಿದ ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಎಲ್ಲರನ್ನೂ ಒಗ್ಗೂಡಿಸಿತು ಎಂದು ಅವರು ಹೇಳಿದರು.

ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಗಾಂಧೀಜಿಯವರು ಎಂದರೆ ಸತ್ಯ, ನ್ಯಾಯ, ಪ್ರಾಮಾಣಿಕತೆ. ಹಾಗಾಗಿಯೇ ಶತಮಾನಗಳ ಕಾಲ ಅವರನ್ನು ಸ್ಮರಿಸುತ್ತೇವೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಲಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಕಾರ್ಯಕ್ರಮ ಮುನ್ನುಡಿಯಾಗಲಿ. ಹೊಸ ಆಶಾಭಾವನೆಯೊಂದಿಗೆ ನಾವು ಬದುಕೋಣ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಡಾ.ರಾಮಕೃಷ್ಣ ಮರಾಠೆ ಅವರ ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ, ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ.ಹೆಗಡೆ, ರಂಗಸೃಷ್ಟಿಯ ಸದಸ್ಯರಾದ ಡಾ.ರಾಮಕೃಷ್ಣ ಮರಾಠೆ, ಡಾ. ಸರಜೂ ಕಾಟ್ಕರ್, ಶಿರೀಶ ಜೋಶಿ, ಶಾಂತಾ ಆಚಾರ್ಯ, ಕೆಂಪಣ್ಣ, ಬಸವರಾಜ ಗಾರ್ಗಿ, ಶರಣಗೌಡ ಪಾಟೀಲ ಮೊದಲಾದವರಿದ್ದರು. ಡಾ.ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಶಿವಲಿಂಗ ಪ್ರಸಾದ ಅವರು ನಿರೂಪಿಸಿದರು. ಶರಣಯ್ಯ ಮಠಪತಿ ವಂದಿಸಿದರು.

ನಂತರ ಸಂಜೆಯವರೆಗೆ ವಿಚಾರಗೋಷ್ಠಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ರಂಗಗೌರವ, ಶಿರೀಶ ಜೋಶಿ ಅವರು ಬರೆದ ನಾಟಕ ಪ್ರಿಂಟಿಂಗ್ ಮಶಿನ್ ಪ್ರದರ್ಶನ ಮೊದಲಾದವು ನಡೆದವು.

 

Tags:

error: Content is protected !!