ಯೋಗವು ಭಾರತವನ್ನು ಅರ್ಥ ಮಾಡಿಕೊಳ್ಳುವ ದ್ವಾರವಾಗಿ ಬೆಳೆದಿದೆ; ಅನೇಕ ರಾಜಮನೆತನಗಳು ಯೋಗಕ್ಕೆ ಸಂಪೂರ್ಣವಾಗಿ ಅರ್ಪಿತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಜಾಗತಿಕ ವಿಸ್ತಾರ ಹಾಗೂ ಅದರ ಭಾರತೀಯ ಬೇರುಗಳ ಕುರಿತು ವಿವರಿಸಿದರು.

ಬೆಂಗಳೂರು ನಗರದ ಹೊರವಲಯದ ಜಿಗಣಿಯಲ್ಲಿರುವ ‘ಪ್ರಶಾಂತ ಕುಟೀರ’ಕ್ಕೆ ಭೇಟಿ ನೀಡಿದ ಪ್ರಧಾನಿ, ಅಲ್ಲಿನ S-VYASA (ಎಸ್-ವ್ಯಾಸ) ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಡಳಿತ ಭವನ ಹಾಗೂ GAIL (ಗೇಲ್) ಸಂಸ್ಥೆಯ ಸಂಕುಚಿತ ಜೈವಿಕ ಅನಿಲ (CBG) ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜಕುಮಾರ್ ಅವರನ್ನು ಸ್ಮರಿಸಿದರು. ಡಾ. ರಾಜಕುಮಾರ್ ಯೋಗ ಸಾಧಕರಾಗಿದ್ದರು ಎಂದು ಅವರು ನೆನಪಿಸಿಕೊಂಡರು. ಆರ್ಎಸ್ಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಅವರನ್ನೂ ಇದೇ ವೇಳೆ ಸ್ಮರಿಸಿದರು. ರಾಷ್ಟ್ರ ಮತ್ತು ಸಮಾಜದ ಸೇವೆಗೆ ಶೇಷಾದ್ರಿ ಅವರು ತೋರಿದ ಅರ್ಪಣಾ ಭಾವವನ್ನು ಅವರು ಗುಣಗಾನ ಮಾಡಿದರು. ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿಯೇ ಎಸ್-ವ್ಯಾಸ (S-VYASA) ರೀತಿಯ ಯೋಗ ಸಂಸ್ಥೆಯನ್ನು ಸ್ಥಾಪಿಸುವಂತೆ ಸ್ಫೂರ್ತಿ ಸಿಕ್ಕಿತು ಎಂದು ಪ್ರಧಾನಿ ತಿಳಿಸಿದರು.

ಅಂದು ಸ್ವಾಮಿ ವಿವೇಕಾನಂದರು ಹಾಕಿಕೊಟ್ಟ ಆಧ್ಯಾತ್ಮಿಕ ಹಾದಿಯಿಂದಲೇ ಇಂದು ಪ್ರಶಾಂತ ಕುಟೀರದಂತಹ ಹಲವಾರು ಶ್ರೇಷ್ಠ ಕೇಂದ್ರಗಳು ಸ್ಥಾಪನೆಯಾಗಿವೆ. ಇಲ್ಲಿ ಕೇವಲ ಯೋಗ ಶಿಕ್ಷಣ ಮಾತ್ರವಲ್ಲದೆ, ವೈಜ್ಞಾನಿಕ ಸಂಶೋಧನೆ, ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ (ಮಾಡರ್ನ್ ಮೆಡಿಕಲ್) ವಿಷಯಗಳನ್ನೂ ಕಲಿಸಲಾಗುತ್ತಿದೆ. ರೋಗ ರುಜಿನಗಳನ್ನು ನಿವಾರಣೆ ಮಾಡುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅತ್ಯಂತ ದೊಡ್ಡದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತದ ಮುಂದಾಳತ್ವದಿಂದಾಗಿಯೇ ಇಂದು ಇಡೀ ವಿಶ್ವವು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ ಎಂದು ಅವರು ನೆನಪಿಸಿದರು. ಆಫ್ರಿಕಾ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಯೋಗ ಮತ್ತು ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತದ ಆಯುಷ್ ಮಂತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಧಾ ಯಾದವ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

