Belagavi

ಮಹಾನಗರ ಪಾಲಿಕೆಯಲ್ಲಿ ಆಡಳಿತ ಯಾರದ್ದಿದೆ?

Share

ರಸ್ತೆ ಗುಂಡಿ ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಬಿಜೆಪಿ ಶಾಸಕರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ನೇರವಾಗಿ ತಿರುಗೇಟು ನೀಡಿದ್ದು, “ಮಹಾನಗರ ಪಾಲಿಕೆಯಲ್ಲಿ ಯಾರ ಆಡಳಿತವಿದೆ?” ಎಂದು ಪ್ರಶ್ನಿಸುವ ಮೂಲಕ ಪಾಲಿಕೆಯ ಜವಾಬ್ದಾರಿಯನ್ನು ನೆನಪಿಸಿದ್ದಾರೆ.

ಬೆಳಗಾವಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬಿಜೆಪಿ ಶಾಸಕರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದಾರೆ. ರಸ್ತೆ ನಿರ್ವಹಣೆಯ ಜವಾಬ್ದಾರಿ ಮಹಾನಗರ ಪಾಲಿಕೆಯದ್ದಾಗಿದ್ದು, ಪ್ರಸ್ತುತ ಪಾಲಿಕೆಯಲ್ಲಿ ಯಾರ ಆಡಳಿತವಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ. ಈ ಹಿಂದೆ ಅವರದೇ ಸರ್ಕಾರವಿದ್ದಾಗ ಶೇಕಡಾ 70ರಷ್ಟು ಅನುದಾನವನ್ನು ದಕ್ಷಿಣ ಕರ್ನಾಟಕಕ್ಕೆ ತೆಗೆದುಕೊಂಡು ಹೋಗಲಾಗಿತ್ತು; ಉತ್ತರ ಭಾಗದಲ್ಲಿ ಬಿಜೆಪಿ ಶಾಸಕರಿದ್ದರೂ ಅನುದಾನ ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪ್ರತಿಯೊಂದಕ್ಕೂ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆಯುವವರು ಮೊದಲು ರಸ್ತೆಗಳನ್ನು ಸುಧಾರಿಸಲಿ ಎಂದು ಹೇಳಿರುವ ಅವರು, ಜಲಜೀವನ್ ಮಿಷನ್ (JJM) ಯೋಜನೆಯಡಿ ಕೇಂದ್ರದಿಂದ ಬರಬೇಕಿರುವ 10 ಸಾವಿರ ಕೋಟಿ ರೂಪಾಯಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಪಾಲಿಕೆಯಲ್ಲಿ ತೆರಿಗೆ ಸೋರಿಕೆಗೆ ಕಡಿವಾಣ ಹಾಕಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆ ಮತ್ತು ದರ ನಿಗದಿ ಕುರಿತು ಮಾತನಾಡಿದ ಸಚಿವರು, ಸಕ್ಕರೆ ಮಾರಾಟದ ಲಾಭಾಂಶದ ಸೂತ್ರದಡಿ ಎಲ್ಲಾ ಕಾರ್ಖಾನೆಗಳು ರೈತರಿಗೆ ದರ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ 45 ರೂಪಾಯಿ ಸಕ್ಕರೆ ದರವನ್ನು ಆಧಾರವಾಗಿಟ್ಟುಕೊಂಡು 3,600 ರೂಪಾಯಿ ನಿಗದಿಪಡಿಸಲಾಗಿತ್ತು. ಈಗ 50 ರೂಪಾಯಿ ಆಧಾರದ ಮೇಲೆ ದರ ಘೋಷಣೆಯಾಗಿದ್ದು, ಸಕ್ಕರೆ 50 ರೂಪಾಯಿ ಮೇಲ್ಪಟ್ಟು ಮಾರಾಟವಾದರೆ ರೈತರಿಗೆ 4,000 ರೂಪಾಯಿ ದರ ಸಿಗಲಿದೆ ಎಂದು ತಿಳಿಸಿದ್ದಾರೆ. ಕಬ್ಬಿನ ರಿಕವರಿ ಆಧಾರದ ಮೇಲೆ ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ದರ ನೀಡಲಾಗುತ್ತಿದ್ದು, ಎಲ್ಲಾ ಜಿಲ್ಲೆಗಳಿಗೆ ಏಕರೂಪದ ದರ ನೀಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದೇ ವೇಳೆ ಬೆಳಗಾವಿ ಜಿಲ್ಲಾ ವಿಭಜನೆ ಮತ್ತು ಅಧಿವೇಶನದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಎಂಬ ಅಭಿಪ್ರಾಯವಿದ್ದು, ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳ ಪ್ರಸ್ತಾಪವಿದೆ ಎಂದಿದ್ದಾರೆ. ಆದರೆ ಅಧಿವೇಶನ ಬಂದಾಗ ಬೈಲಹೊಂಗಲ, ಅಥಣಿ, ರಾಮದುರ್ಗ ಸೇರಿದಂತೆ ಎಲ್ಲರೂ ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಇಡುತ್ತಿರುವುದರಿಂದ ಒಮ್ಮತ ಮೂಡುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಕಳೆದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದರಿಂದ ಪ್ರತಿಭಟನೆಗಳ ಸಂಖ್ಯೆ ಕಡಿಮೆಯಾಗಿತ್ತು ಎಂದಿರುವ ಸಚಿವರು, ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ ವಿಚಾರವಾಗಿ ಸ್ಪಷ್ಟನೆ ನೀಡುತ್ತಾ, ಐದು ವಿದ್ಯುತ್ ಸಂಸ್ಥೆಗಳಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ಬಾಕಿಯಿದ್ದು, ಸುವರ್ಣ ಸೌಧದ್ದು ಕೇವಲ 11 ಲಕ್ಷ ರೂಪಾಯಿ ಮಾತ್ರ ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ.

Tags:

error: Content is protected !!