Belagavi

ಮಲೇಷ್ಯಾದಲ್ಲಿ ಬೆಳಗಾವಿಯ ಶಾಂತಲಾ ನಾಟ್ಯಾಲಯದ ‘ನೃತ್ಯೋಲ್ಲಾಸ’ ಮೋಡಿ

Share

ಬೆಳಗಾವಿ: ಕನ್ನಡ ನಾಡು, ನುಡಿ, ಸಂಸ್ಕೃತಿಯ ಹಿರಿಮೆಯನ್ನು ದೇಶ-ವಿದೇಶಗಳಲ್ಲಿ ಪಸರಿಸುವ ನಿಟ್ಟಿನಲ್ಲಿ ಬೆಳಗಾವಿಯ ಶಾಂತಲಾ ನಾಟ್ಯಾಲಯದ ತಂಡ ಮಲೇಷ್ಯಾದಲ್ಲಿ ನಡೆದ ಕರ್ನಾಟಕೋತ್ಸವದಲ್ಲಿ ಮನಮೋಹಕ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಲೇಷ್ಯಾದ ಪರ್ಸುಟನ್ ಕೆಬಾಜಿಕನ್ ಕನ್ನಡ ಸಂಘವು ಆಯೋಜಿಸಿದ್ದ ಕರ್ನಾಟಕೋತ್ಸವದಲ್ಲಿ, ಬೆಳಗಾವಿಯ ಶಾಂತಲಾ ನಾಟ್ಯಾಲಯದ ಕಲಾವಿದರು ‘ನೃತ್ಯೋಲ್ಲಾಸ’ ಎಂಬ ಸುಂದರ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ನೋಡುಗರ ಮನಸೂರೆಗೊಂಡರು.

ಕನ್ನಡದ ಕಲಾ ಪರಂಪರೆ, ನೃತ್ಯದ ಲಯಬದ್ಧತೆ, ಭಾವಾಭಿನಯ ಹಾಗೂ ಕಲಾವಿದರ ಪ್ರತಿಭೆಯ ಸಮ್ಮಿಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಗುರು ರೇಖಾ ಅಶೋಕ ಹೆಗಡೆ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯದ ಹೆಜ್ಜೆ, ತಾಳ, ಲಯ ಹಾಗೂ ಭಾವಾಭಿವ್ಯಕ್ತಿಯ ಮೂಲಕ ಕಲಾವಿದರು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಪ್ರದರ್ಶನದ ವಿವಿಧ ಹಂತಗಳಲ್ಲಿ ಪ್ರೇಕ್ಷಕರಿಂದ ವ್ಯಕ್ತವಾದ ಹರ್ಷೋದ್ಗಾರ ಹಾಗೂ ಕರತಾಡನ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.
ಪ್ರದರ್ಶನದ ಬಳಿಕವೂ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತು.

ಈ ಕಾರ್ಯಕ್ರಮದಲ್ಲಿ ಗುರು ರೇಖಾ ಅಶೋಕ ಹೆಗಡೆ, ಋತ್ವಿಕ್ ಅಶೋಕ, ನಿನಾದ ಅಶೋಕ, ಮಹತಿ ಹೆಗಡೆ, ಸಮೀಕ್ಷಾ ಕಾರಂತ್, ಅನುಶ್ರೀ ಖಡಬಡಿ, ಶಾರ್ವರಿ ವಿಜಯಕುಮಾರ, ನಿವೇದಿತಾ ಇಂಗಳಗಿ ಹಾಗೂ ಸರೋಜಿನಿ ಘಟ್ನಟ್ಟಿ ಪಾಲ್ಗೊಂಡು ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದರು.

ವಿದೇಶದಲ್ಲೂ ಕನ್ನಡ ಕಲೆಯ ಕಂಪು

ಶಾಂತಲಾ ನಾಟ್ಯಾಲಯವು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ವಿದೇಶಗಳಲ್ಲಿಯೂ ಪರಿಚಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ತಂಡವು ಈ ಹಿಂದೆಯೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದೆ.

2017ರ ಏಪ್ರಿಲ್‌ನಲ್ಲಿ ಬಹ್ರೇನ್ ಕನ್ನಡ ಸಂಘ ಆಯೋಜಿಸಿದ್ದ ವಸಂತೋತ್ಸವದಲ್ಲಿಯೂ ಶಾಂತಲಾ ನಾಟ್ಯಾಲಯದ ತಂಡ ಭಾಗವಹಿಸಿತ್ತು.
ಇದೀಗ ಮಲೇಷ್ಯಾದ ಕರ್ನಾಟಕೋತ್ಸವದಲ್ಲಿ ಪಾಲ್ಗೊಂಡು ಮತ್ತೊಮ್ಮೆ ಕನ್ನಡದ ಕಲಾ ವೈಭವವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅನಾವರಣಗೊಳಿಸಿದೆ.

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿದೇಶದ ಕನ್ನಡಿಗರ ಮುಂದೆ ಕನ್ನಡದ ಸಾಂಸ್ಕೃತಿಕ ಸೊಬಗನ್ನು ನೃತ್ಯದ ಮೂಲಕ ಕಟ್ಟಿಕೊಟ್ಟ ಶಾಂತಲಾ ನಾಟ್ಯಾಲಯದ ಈ ಪ್ರಯತ್ನ ಕನ್ನಡದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರಸಾರಕ್ಕೆ ಮಹತ್ವದ ಕೊಡುಗೆಯಾಗಿದೆ.

ಬೆಳಗಾವಿಯ ಕಲಾವಿದರು ವಿದೇಶಿ ನೆಲದಲ್ಲಿ ಕನ್ನಡದ ಕಲಾ ಕಂಪನ್ನು ಪಸರಿಸಿರುವುದು ಸ್ಥಳೀಯ ಕಲಾವಲಯದಲ್ಲಿಯೂ ಸಂತಸ ಮೂಡಿಸಿದೆ.

Tags:

error: Content is protected !!