Belagavi

ಈ ಬಾರಿಯೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಎಂ.ಇ.ಎಸ್.

Share

ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೂ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಕರಾಳ ದಿನಾಚರಣೆ ಮತ್ತು ಪ್ರತಿಭಟನಾ ರ್ಯಾಲಿ ನಡೆಸಿದೆ. ಭಾಷಾವಾರು ಪ್ರಾಂತ್ಯ ರಚನೆಯ ವೇಳೆ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಮರಾಠಿ ಭಾಷಿಕರು, ಕೇಂದ್ರ ಸರ್ಕಾರವು ಕೂಡಲೇ ಈ ಗಡಿ ವಿವಾದವನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಳಗಾವಿಯ ಧರ್ಮವೀರ ಸಂಭಾಜೀ ಮಹಾರಾಜ್ ಉದ್ಯಾನದಿಂದ ಆರಂಭವಾದ ಈ ಬೃಹತ್ ರ್ಯಾಲಿಯು ಡಾ. ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ, ಶಹಾಪೂರ ಮೂಲಕ ಸಾಗಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ಕರ್ನಾಟಕ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಸಿಗದಿದ್ದರೂ, ಕಳೆದ 70 ವರ್ಷಗಳಿಂದ ಮರಾಠಿ ಜನರ ಶಕ್ತಿಯಿಂದಲೇ ಈ ಹೋರಾಟವನ್ನು ಮುಂದುವರಿಸಿಕೊಂಡು ಬಂದಿರುವುದಾಗಿ ಎಂಇಎಸ್ ಅಧ್ಯಕ್ಷ ಪ್ರಕಾಶ್ ಮರಗಾಳೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಗಡಿ ವಿವಾದದ ವಿಚಾರಣೆಯು ಶೀಘ್ರದಲ್ಲೇ ಬಂದು ತಮಗೆ ಸೂಕ್ತ ನ್ಯಾಯ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಮುಂಬೈ ಪ್ರಾಂತದಲ್ಲಿದ್ದ ಮರಾಠಿ ಭಾಷಿಕ ಗಡಿ ಭಾಗ ಹಾಗೂ 865 ಹಳ್ಳಿಗಳನ್ನು ಮೈಸೂರು (ಕರ್ನಾಟಕ) ರಾಜ್ಯಕ್ಕೆ ಸೇರಿಸುವ ಮೂಲಕ ತಮ್ಮ ಮೇಲೆ ಅನ್ಯಾಯ ಎಸಗಲಾಗಿದೆ ಎಂದು ಎಂಇಎಸ್ ಮುಖಂಡರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರವು ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿದ್ದರೂ, ಏಳು ದಶಕಗಳ ಬಳಿಕವೂ ತಮ್ಮ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ ಎಂದು ಮಾಜಿ ಶಾಸಕ ಮನೋಹರ್ ಕಿಣೇಕರ್ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಫ್ಯಾಕ್ಟ್ ಫೈಂಡಿಂಗ್ ಕಮಿಟಿ ವರದಿಯನ್ನು ಕಡೆಗಣಿಸಿ ಗಡಿ ಭಾಗದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ ಎಂದು ಮಾಜಿ ಮಹಾಪೌರ ಮಾಲೋಜಿರಾವ್ ಅಷ್ಟೇಕರ್ ದೂರಿದರು.
ಸಂಯುಕ್ತ ಮಹಾರಾಷ್ಟ್ರ ಚಳವಳಿಯ 105 ಹುತಾತ್ಮರಲ್ಲಿ ಮೊದಲ ಐವರು ಹುತಾತ್ಮರು ಬೆಳಗಾವಿಯವರೇ ಆಗಿದ್ದರು ಎಂದು ರಣಜೀತ್ ಚವ್ಹಾಣ್ ಪಾಟೀಲ್ ಸ್ಮರಿಸಿದ್ದಾರೆ.

ಪೊಲೀಸ್ ಲಾಠಿಚಾರ್ಜ್ ಹಾಗೂ ವಿವಿಧ ಕಿರುಕುಳಗಳನ್ನು ಅನುಭವಿಸಿದರೂ ಸಮಿತಿಯ ನಿಷ್ಠೆ ಬದಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಆರ್.ಎಂ. ಚೌಗುಲೆ ಮಾತನಾಡಿ, ಮಹಾರಾಷ್ಟ್ರದೊಂದಿಗೆ ಸೇರಲು ಗಡಿ ಭಾಗದ ಮರಾಠಿ ಭಾಷಿಕರು ಅತ್ಯಂತ ಸಂಯಮದಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರವು ಈ ದೀರ್ಘಕಾಲದ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೋವಾವೇಸ್ ಜಗಜ್ಯೋತಿ ಬಸವೇಶ್ವರ ಮೇಲ್ಸೇತುವೆ ಬಳಿಯ ಮರಾಠಾ ಮಂದಿರ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಈ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಭಾಗವಹಿಸಿದ್ದರು. ಬೆಳಗಾವಿಯಲ್ಲಿ ನವೆಂಬರ್‌ 1 ರಂದು ನಡೆಸಲು ಉದ್ದೇಶಿಸಿರುವ ಕರಾಳ ದಿನ
ಪ್ರತಿಭಟನೆಗೆ ಅವಕಾಶ ನೀಡದೆ ನಿರ್ಬಂಧ ವಿಧಿಸಬೇಕೆಂದು ಕೋರಿರುವ ಅರ್ಜಿ ಸಂಬಂಧ ಹೈಕೋರ್ಟ್‌ನಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಎಂಇಎಸ್‌ ಅಧ್ಯಕ್ಷ ಮನೋಹರ ಕಿಣೇಕರ್‌ಗೆ ನೋಟಿಸ್‌
ಜಾರಿಗೊಳಿಸಲಾಗಿತ್ತು.ಆದರೂ ಅದನ್ನ ಕಡೆಗಣಿಸಲಾಗಿದ್ದು,
ಜಿಲ್ಲಾಡಳಿತದಿಂದ ಅನುಮತಿ ನೀಡದಿದ್ದರೂ ಪೊಲೀಸ್ ಭದ್ರತೆಯಲ್ಲಿ ಕರಾಳ ದಿನದ ರ್ಯಾಲಿ ನಡೆಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಯಿತು.

Tags:

error: Content is protected !!