Belagavi

ಮಲಪ್ರಭಾ ಸಕ್ಕರೆ ಕಾರ್ಖಾನೆ ಟರ್ಬೈನ್ ದುರಂತ: ಕಬ್ಬು ಡೈವರ್ಟ್ ಆರೋಪ, ನ್ಯಾಯಾಂಗ ತನಿಖೆಗೆ ಸಿದ್ದಗೌಡ ಮೋದಗಿ ಆಗ್ರಹ

Share

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಟರ್ಬೈನ್ ದುರಂತ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾರ್ಖಾನೆ ಹಾನಿ ಮತ್ತು ಕಬ್ಬು ಡೈವರ್ಟ್ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ಆರೋಪಿಸಿರುವ ಭಾರತೀಯ ಕೃಷಿಕ ಸಮಾಜದ ಮುಖಂಡ ಸಿದ್ದಗೌಡ ಮೋದಗಿ, ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದಿದ್ದಾರೆ.

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿರುವ ಶ್ರೀ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಐದು ದಿನಗಳ ಹಿಂದೆ ಸಂಭವಿಸಿದ ಟರ್ಬೈನ್ ಸ್ಫೋಟದಿಂದ ಕೋಟ್ಯಂತರ ರೂಪಾಯಿ ಹಾನಿಯಾಗಿದ್ದು, ಕಬ್ಬು ಹಂಗಾಮಿಗೆ ತೊಡಕಾಗಿ ರೈತರಲ್ಲಿ ಆತಂಕ ಮೂಡಿದೆ. ಆಡಳಿತ ಯಂತ್ರದ ವೈಫಲ್ಯ, ನಿರ್ಲಕ್ಷ್ಯ ಹಾಗೂ ಮುಂದಾಲೋಚನೆಯ ಕೊರತೆಯಿಂದ ಈ ಅವಘಡ ಸಂಭವಿಸಿದ್ದು, ಇದಕ್ಕೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಮತ್ತು ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಭಾರತೀಯ ಕೃಷಿಕ ಸಮಾಜ (ಬಿಕೆಎಸ್) – ಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ರೈತರ ಶ್ರಮದ ಫಲವಾದ ಕಾರ್ಖಾನೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿ, ಸ್ವಂತ ಪ್ರಭಾವ ಬೆಳೆಸಿಕೊಳ್ಳಲು ಕಬ್ಬನ್ನು ಬೇರಡೆ ಡೈವರ್ಟ್ ಮಾಡಲಾಗಿದೆ ಎಂದು ಸಿದ್ದಗೌಡ ಮೋದಗಿ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಖಾನೆಯ ಅಧ್ಯಕ್ಷರು ರಾಜಕೀಯ ಪ್ರಭಾವಿಗಳಾಗಿರುವುದರಿಂದ ಪಾರದರ್ಶಕ ತನಿಖೆಗಾಗಿ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು, ಆರ್ಥಿಕ ನಷ್ಟವನ್ನು ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Tags:

error: Content is protected !!