ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ ಕ್ಷೇಮಾಭಿವೃದ್ಧಿ ಸಂಘದ ಬಡವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದಲ್ಲಿ, ಬೆಂಗಳೂರಿನ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯವರ ಸಹಯೋಗದಲ್ಲಿ ಅನ್ನದಾಸೋಹಕ್ಕೆ ಚಾಲನೆ ನೀಡಲಾಯಿತು.

ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಜ್ಯೋತಿ ಬೆಳಗಿಸುವ ಮೂಲಕ ವಸತಿ ನಿಲಯದ ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗಿದ್ದು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ ಅವರಿಗೆ ಉಚಿತವಾಗಿ ಅನ್ನದಾಸೋಹದ ವ್ಯವಸ್ಥೆಯನ್ನ ಕಲ್ಪಿಸಲಾಗಿರಲಿಲ್ಲ. ವಿದ್ಯಾರ್ಥಿನಿಯರು ಹೊರಗಡೆ ಹೋಗಿ ಊಟೋಪಚಾರವನ್ನು ಮಾಡಿ ವಿದ್ಯಾಭ್ಯಾಸವನ್ನು ಕಲಿಯಬೇಕಾಗಿತ್ತು. ಈ ನಿಟ್ಟಿನಲ್ಲಿ ಹಲವು ದಾನಿಗಳು ಮುಂದೆ ಬಂದಿದ್ದರೂ ಉಚಿತ ಅನ್ನಪ್ರಸಾದಕ್ಕೆ ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯನ್ನು ಸಂಪರ್ಕಿಸಲು ಅವರು ಖುದ್ದು ಆಗಮಿಸಿ ವಸತಿನಿಲಯವನ್ನು ಪರಿಶೀಲಿಸಿ, ಅನ್ನದಾಸೋಹಕ್ಕೆ ಕೈಜೋಡಿಸಿದ್ದಾರೆ. ಸುಮಾರು 84 ವಿದ್ಯಾರ್ಥಿನಿಯರು ಇಲ್ಲಿ ಆಶ್ರಯ ಪಡೆದು ಅಧ್ಯಯನದಲ್ಲಿ ತೊಡಗಿದ್ದಾರೆ. ಅನ್ನಪ್ರಸಾದಕ್ಕೆ ಅವರು ಇನ್ನು ಹೊರಗೆ ಹೋಗಬೇಕಾಗಿಲ್ಲ. ಅವರಿಗೆ ಇಲ್ಲಿಯೇ ಅನುಕೂಲ ಕಲ್ಪಿಸಲಾಗುವುದು. ಇದಕ್ಕೆ ಕೈಜೋಡಿಸಿದ ಗುಬ್ಬಿ ತೋಟದಪ್ಪ ಟ್ರಸ್ಟ್ಗೆ ಮಹಾಸಭೆಯು ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ಹೇಳಿದರು.
ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ದೂರದ ಊರುಗಳಿಂದ ಬೆಳಗಾವಿ ನಗರಕ್ಕೆ ಉನ್ನತ ಶಿಕ್ಷಣವನ್ನು ಪಡೆಯಲು ಆಗಮಿಸುವ ಸಮಾಜದ ಬಡ ಹೆಣ್ಣುಮಕ್ಕಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಬೇಕೆಂಬುದು ಡಾ.ಪ್ರಭಾಕರ ಕೋರೆ ಹಾಗೂ ಮಹಾಸಭೆಯ ಸಂಕಲ್ಪವಾಗಿತ್ತು. ಡಾ.ಪ್ರಭಾಕರ ಕೋರೆಯವರ ಸಮರ್ಥನೇತೃತ್ವದಲ್ಲಿ ವಸತಿ ನಿಲಯ ಅನೇಕ ದಾನಿಗಳ ಸಹಾಯದಿಂದ ಪ್ರಾರಂಭಗೊಂಡಿದೆ. ವಿದ್ಯಾರ್ಥಿನಿಯರಿಗೆ ಉಚಿತ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸುವುದು ನಮ್ಮ ಕರ್ತವ್ಯವಾಗಿತ್ತು, ಅದನ್ನು ಗುಬ್ಬಿ ತೋಟದಪ್ಪ ಟ್ರಸ್ಟ್ ಸಹಕಾರದಿಂದ ಚಾಲನೆ ದೊರೆತಿದೆ ಎಂದು ಧನ್ಯತೆಯನ್ನು ವ್ಯಕ್ತಪಡಿಸಿದರು.
ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ಶತಮಾನಗಳ ಅನ್ನದಾಸೋಹದ ಇತಿಹಾಸ ಹೊಂದಿರುವ ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಉತ್ತರ ಕರ್ನಾಟಕ ಬೆಳಗಾವಿಗೂ ತನ್ನ ಸೇವೆಯನ್ನು ನೀಡಲು ಮುಂದಾಗಿರುವುದು ಅತೀವ ಹೆಮ್ಮೆ ಹಾಗೂ ಸಂತೋಷವನ್ನು ತಂದಿದೆ. ಸಮಾಜದ ಹೆಣ್ಣುಮಕ್ಕಳ ಕಲ್ಯಾಣಕ್ಕೆ ಗುಬ್ಬಿ ತೋಟದಪ್ಪ ಸಂಸ್ಥೆಯ ಕೊಡುಗೆ ಅನನ್ಯವೆನಿಸಿದೆ. ಈ ದಾಸೋಹ ಸೇವೆ ಅನುದಿನವು ನಡೆಯುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭೆಯ ಉಪಾಧ್ಯಕ್ಷ ಹಿರಿಯ ನ್ಯಾಯವಾದಿ ಮಾರುತಿ ಝೀರಲಿ, ಆರ್.ಪಿ.ಪಾಟೀಲ, ವಿ.ಕೆ.ಪಾಟೀಲ, ಸೋಮಲಿಂಗ ಮಾವಿನಕಟ್ಟಿ, ಪ್ರೀತಿ ದೊಡವಾಡ, ಅಂಜನಾ ಕಿತ್ತೂರ, ಜ್ಯೋತಿ ಬಾದಾಮಿ, ಶ್ರೀಮತಿ ರಾಜೇಶ್ವರಿ ಕವಟಗಿಮಠ, ಸರೋಜನಿ ನಿಶಾನದಾರ, ಮಹಾಂತೇಶ ಮೆಣಸಿನಕಾಯಿ, ಉಪಸ್ಥಿತರಿದ್ದರು. ಶೈಲಜಾ ಸಂಸುದ್ದಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.
