ನಾಡಿನಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಬಹಳ ಸಡಗರ-ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗಿದೆ. ಪೇಡಾ ನಗರಿ ಧಾರವಾಡದಲ್ಲಿ ಗೌಳಿ ಸಮುದಾಯದಿಂದ ನಡೆದ ‘ಎಮ್ಮೆ ಬೆದರಿಸುವ ಸ್ಪರ್ಧೆ’ಯೂ ಸಹ ಎಲ್ಲರ ಗಮನಸೆಳೆಯಿತು.
ಧಾರವಾಡ ನಗರದ ಗೌಳಿ ಸಮುದಾಯದ ವತಿಯಿಂದ ಈ ‘ಎಮ್ಮೆ ಬೆದರಿಸುವ ಸ್ಪರ್ಧೆ’ ನಡೆದಿದ್ದು, ಸ್ಪರ್ಧೆಯಲ್ಲಿ ಬೈಕ್ ಅನ್ನು ಎಮ್ಮೆಗಳು ಹಿಂಬಾಲಿಸಿ ಓಡುವ ನಿಯಮ ರೂಪಿಸಲಾಗಿತ್ತು. ಪ್ರತಿ ವರ್ಷ ದೀಪಾವಳಿ ಹಬ್ಬದಂದು ಗೌಳಿ ಸಮುದಾಯದ ಜನರು ಈ ಸ್ಪರ್ಧೆಯನ್ನು ಆಯೋಜಿಸುತ್ತಾರೆ. ನಗರದ ಚನ್ನಬಸವೇಶ್ವರ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೆ ಎಮ್ಮೆಗಳ ಓಟದ ಸ್ಪರ್ಧೆ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಎಮ್ಮೆಗಳು ಭಾಗವಹಿಸಿದ್ದು, ತಮ್ಮ ತಮ್ಮ ಮಾಲೀಕರ ಬೈಕ್ ಸೌಂಡ್ ಹಾಗೂ ವಾಸನೆಯ ಮೂಲಕ ಬೈಕ್ ಬೆನ್ನಟ್ಟಿ ಹೋಗುವ ದೃಶ್ಯಗಳು ಎಲ್ಲರ ಗಮನಸೆಳೆದವು.
