Vijaypura

ವಿಜಯಪುರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮತ್ತೆ ವಿಘ್ನ..!₹3,600 ದರ ನೀಡಲು ಭೀಮಾ ಬೆಲ್ಟ್‌ನ 7 ಕಾರ್ಖಾನೆಗಳ ಹಿಂದೇಟು

Share

ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರ ಎರಡು ತಿಂಗಳ ಸುದೀರ್ಘ ಹೋರಾಟದ ಬಳಿಕ ಪ್ರತಿ ಟನ್ ಕಬ್ಬಿಗೆ ₹3,600 ದರ ನಿಗದಿಯಾಗಿದ್ದರೂ, ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮತ್ತೆ ವಿಘ್ನ ಎದುರಾಗಿದೆ. ನಿಗದಿತ ದರ ನೀಡಲು ಭೀಮಾ ಬೆಲ್ಟ್‌ನ ಏಳು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಿಂದೇಟು ಹಾಕುತ್ತಿರುವುದರಿಂದ ಇಂದು ವಿಜಯಪುರದಲ್ಲಿ ಕಾರ್ಖಾನೆಗಳು ಆರಂಭವಾಗುವುದು ಅನುಮಾನ ಎನ್ನಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 10 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ ಭೀಮಾ ಬೆಲ್ಟ್‌ನ ಏಳು ಕಾರ್ಖಾನೆಗಳು ನಿಗದಿತ ₹3,600 ದರ ನೀಡುವ ವಿಚಾರದಲ್ಲಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.

ತಮ್ಮ ಕಾರ್ಖಾನೆಗಳ ಕಬ್ಬಿನ ರಿಕವರಿ ಪ್ರಮಾಣ ಕಡಿಮೆ ಇರುವುದರಿಂದ ಕೃಷ್ಣಾ ಬೆಲ್ಟ್‌ನ ಕಾರ್ಖಾನೆಗಳು ನೀಡುವ ದರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಕೆಲ ಕಾರ್ಖಾನೆ ಮಾಲೀಕರ ವಾದವಾಗಿದೆ. ಭೀಮಾ ಬೆಲ್ಟ್‌ನ ಕಾರ್ಖಾನೆಗಳ ರಿಕವರಿ ಪ್ರಮಾಣ ಶೇ.9.9ರಿಂದ ಶೇ.10.25ರಷ್ಟಿದೆ. ಹೀಗಾಗಿ ನಿಗದಿಪಡಿಸಿದ ದರ ನೀಡಲು ಕಷ್ಟವಾಗಲಿದೆ ಎಂದು ಮಾಲೀಕರು ಹೇಳುತ್ತಿದ್ದಾರೆ. ಆದರೆ, ಎರಡು ತಿಂಗಳ ಹೋರಾಟದ ಬಳಿಕ ನಿಗದಿಯಾದ ₹3,600 ದರವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು. ಕಾರ್ಖಾನೆ ಮಾಲೀಕರಿಂದ ನಿಗದಿತ ದರ ನೀಡುವ ಖಚಿತ ಭರವಸೆ ಪಡೆದ ಬಳಿಕವೇ ಕಾರ್ಖಾನೆಗಳನ್ನು ಆರಂಭಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆನಂದ ಕೆ. ಅವರು ಇಂದು ಸಂಜೆ 4 ಗಂಟೆಗೆ ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆ ಕರೆದಿದ್ದಾರೆ. ಸಭೆಯಲ್ಲಿ ದರದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯಲಿದೆ. ಸಭೆ ಯಶಸ್ವಿಯಾಗಿ, ಕಾರ್ಖಾನೆ ಮಾಲೀಕರು ನಿಗದಿತ ದರ ನೀಡಲು ಒಪ್ಪಿಗೆ ಸೂಚಿಸಿದರೆ ನವೆಂಬರ್ 8ರಿಂದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಹೀಗಾಗಿ ಇಂದಿನ ಸಭೆಯತ್ತ ಕಬ್ಬು ಬೆಳೆಗಾರರ ಚಿತ್ತ ನೆಟ್ಟಿದೆ.

Tags:

error: Content is protected !!