Belagavi

ಅಧಿವೇಶನದಲ್ಲಿ ರೈತ ಚರ್ಚೆಗೆ ಪ್ರತ್ಯೇಕ ದಿನ ನೀಡಿ; ಕರ್ನಾಟಕ ರೈತ ಸಂಘದಿಂದ ಒತ್ತಾಯ

Share

ಬೆಳಗಾವಿಯಲ್ಲಿ ಡಿಸೆಂಬರ್ 2ರಿಂದ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು, ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಬೇಕೆಂಬ ಆಗ್ರಹ ಜೋರಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ಆರಂಭವಾಗುವ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಚರ್ಚೆಗೆ ಕನಿಷ್ಠ ಒಂದು ದಿನದ ಸಂಪೂರ್ಣ ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದ ಒತ್ತಾಯಿಸಿದೆ.

ಕಳೆದ ಮೂರು ತಿಂಗಳಿನಿಂದ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮತ್ತು ಧರಣಿಗಳ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯಕ್ಕೆ ಆದ್ಯತೆ ನೀಡಬೇಕು ಹಾಗೂ ಸರ್ಕಾರ ಇನ್ನೂ ಕಬ್ಬಿಗೆ ಎಸ್‌ಎಪಿ ಘೋಷಿಸಿಲ್ಲದ ಕಾರಣ ಕನಿಷ್ಠ ₹1,000 ಎಸ್‌ಎಪಿ ನಿಗದಿಪಡಿಸಿ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕೆಲವು ಕಾರ್ಖಾನೆಗಳು ₹3,720, ₹3,800 ಮತ್ತು ₹4,000 ದರ ಘೋಷಿಸಿದ್ದು, ಕಾರ್ಖಾನೆಗಳ ಬಿಲ್ ದರ ಹಾಗೂ ಸರ್ಕಾರದ ಎಸ್‌ಎಪಿ ಸೇರಿ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹4,500 ವರೆಗೆ ದರ ದೊರೆಯುವಂತಾಗಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ಹೊರ ಜಿಲ್ಲೆಗಳಿಂದ ಆಗಮಿಸುವ ರೈತರು ಮತ್ತು ರೈತ ಸಂಘಟನೆಗಳ ಕಾರ್ಯಕರ್ತರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು, ಕೆಲವು ವ್ಯಕ್ತಿಗಳು ಅಥವಾ ಗುಂಪುಗಳು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ವಸತಿ ಸೌಲಭ್ಯ ಮಾಡಿಕೊಳ್ಳುವಂತಾಗಬಾರದು, ಎಲ್ಲಾ ರೈತರಿಗೂ ಸಮಾನವಾಗಿ ಹಾಗೂ ವ್ಯವಸ್ಥಿತವಾಗಿ ವಸತಿ ಸೌಲಭ್ಯ ಒದಗಿಸಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಜೊತೆಗೆ ಪ್ರಸ್ತುತ ಭತ್ತದ ಕೊಯ್ಲು ಕಾರ್ಯ ಆರಂಭವಾಗಿದ್ದು, ದಕ್ಷಿಣ ಕರ್ನಾಟಕದಲ್ಲಿ ನೀಡುವಂತೆ ಉತ್ತರ ಕರ್ನಾಟಕದ ಭತ್ತ ಬೆಳೆಗಾರರಿಗೂ ಸಬ್ಸಿಡಿ ನೀಡಿ, ಪ್ರತಿಯೊಬ್ಬ ರೈತನ ಖಾತೆಗೂ ಕನಿಷ್ಠ ₹500 ಮುಂಗಡ ಅಥವಾ ಸಹಾಯಧನ ನೀಡಬೇಕು ಎಂದು ಸುರೇಶ್ ಬಿ. ಪರಗಣ್ಣವರ ಒತ್ತಾಯಿಸಿದ್ದಾರೆ.
ಈ ವೇಳೆ ಗಣೇಶ್ ಈಳಗೇರ, ಬಸವರಾಜ ಕಲ್ಲೂರ ಮತ್ತು ರಾಘವೇಂದ್ರ ನಾಯಕ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!